ಕೊರೋನಾಕ್ಕೆ ತುತ್ತಾಗಿ ಮೃತಪಟ್ಟ ಕಲ್ಲೂರ ಗ್ರಾಮದ ಗ್ರಂಥಪಾಲಕ ಇನ್ನೂ ಸಿಗದ ಸರಕಾರದ ನೆರವು; ಬೀದಿಗೆ ಬಿದ್ದ ಕುಟುಂಬ

ಎ.ಬಿ.ಪಟೇಲ ಸೊನ್ನ
ಅಫಜಲಪುರ:ಜ.13: ಅಫಜಲಪುರ ತಾಲೂಕಿನ ಕಲ್ಲೂರ ಗ್ರಾಮದ ಗ್ರಂಥಪಾಲಕ ಮತ್ತು ಪತ್ರಿಕಾ ವಿತರಕರಾಗಿದ್ದ ಚನ್ನಮಲ್ಲಪ್ಪ ಎಮ್ ಪಾಟೀಲ ಮಹಾಮಾರಿ ಕೊರೋನಾ ರೋಗಕ್ಕೆ ತುತ್ತಾಗಿ ಕಳೇದ 09 ಸೆಪ್ಟೆಂಬರ್ 2020ರಂದು ಬೆಳಗಿನ ಜಾವ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟರು. ಆದರೆ ಸರಕಾರದಿಂದ ಈವರೆಗೂ ಅವರ ಕುಟುಂಬಕ್ಕೆ ಪರಿಹಾರ ಸಿಗದೆ ಇರುವುದರಿಂದ ಆತನ ಕುಟುಂಬ ಇಂದು ಕಣ್ಣೀರಿನಲ್ಲಿ ಕೈ ತೊಳೆದುಕೊಳ್ಳುವ ಮೂಲಕ ಬೀದಿಗೆ ಬಿದ್ದಿದೆ.
ಕಳೆದ ಒಂದು ದಶಕಗಳಿಂದ ಕಲ್ಲೂರ ಗ್ರಾಮದಲ್ಲಿ ಗ್ರಂಥಾಲಯದ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ಬರುವ ಸಂಬಳ ಅತಿಕಡಿಮೆಯಾಗಿದ್ದರಿಂದ ಪರ್ಯಾಯವಾಗಿ ದಿನನಿತ್ಯ ಪತ್ರಿಕೆ ವಿತರಿಸುವ ಹಾಗೂ ಹಾಲು ಮಾರುವ ಉಪ ಕಸುಬು ಮಾಡಿಕೊಂಡು ಜೀವನ ನಡೆಸುತ್ತಿದ್ದ ಚನ್ನಮಲ್ಲಪ್ಪ ಪಾಟೀಲರÀದ್ದು ಬಡತನ ಕುಟುಂಬ. ಹೀಗಾಗಿ ದಿನನಿತ್ಯ ನಸುಕಿನ 04 ಗಂಟೆಗೆ ಕಲ್ಲೂರ ಗ್ರಾಮ ಸೇರಿದಂತೆ ಕೊಳ್ಳೂರು, ಗುಡ್ಡೇವಾಡಿ, ಘೂಳನೂರ ಗ್ರಾಮಗಳಿಗೆ ಪತ್ರಿಕೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಚನ್ನಮಲ್ಲಪ್ಪ ಎಮ್ ಪಾಟೀಲರ ವಯಸ್ಸು 42 ಆದರೂ ಬಲು ಗಟ್ಟಿಮುಟ್ಟ ಮನುಷ್ಯ. ಮಳೆ ಚಳಿ ಗಾಳಿ ಎನ್ನದೆ ದ್ವಿಚಕ್ರ ವಾಹನದ ಮೇಲೆ ನಸುಕಿನ ಜಾವವೇ ಕಲ್ಲೂರ ಗ್ರಾಮದಿಂದ ಅಫಜಲಪುರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಪತ್ರಿಕೆ ಬರುವ ಮುನ್ನವೇ ಬಂದು ನಿಲ್ಲುವ ಕಾಯಕಯೋಗಿ. ಎಲ್ಲಾ ಕನ್ನಡ ದಿನಪತ್ರಿಕೆಗಳನ್ನು ತನ್ನ ದ್ವಿಚಕ್ರ ವಾಹನದ ಎರಡು ಬದಿಯ ಕೈಚೀಲಕ್ಕೆ ಹಾಕಿಕೊಂಡು ಹೊರಟನೆಂದರೆ, ಜನ ಹಾಸಿಗೆಯಿಂದ ಏಳುವ ಮೊದಲೇ ಹಾಲು-ಪೇಪರ ಹಾಕಿ ಗಡಿಯಾರದ ಅಲಾರಾಮದಂತೆ ಎಚ್ಚರಿಸುತ್ತಿದ್ದ. ಎಷ್ಟೇ ಕಷ್ಟವಿದ್ದರೂ ಯಾರಿಗೂ ಕೈಚಾಚುವ ಜಾಯಮಾನ ಅವರಲ್ಲಿರಲಿಲ್ಲ. ಆದರೆ ಹಠಮಾರಿ ಹಾಗೂ ಸ್ವಾಭಿಮಾನಿ. ಹುಂಬುತನದ ಸ್ವಭಾವದ ಜೊತೆಗೆ ಸರಳ, ಸಾದಾ ಜೀವಿಯಾಗಿದ್ದ ಚನ್ನಮಲ್ಲಪ್ಪ ಪಾಟೀಲರಿಗೆ ಮಹಾಮಾರಿ ಕೊರೋನಾ ರೋಗಕ್ಕೆ ತುತ್ತಾದ ನಂತರ ಅವರ ಸಹೋದರ ತನ್ನ ಅಣ್ಣನಾದ ಚನ್ನಮಲ್ಲಪ್ಪನನ್ನು ಕೊರೋನಾ ರೋಗದಿಂದ ಉಳಿಸಲು ಸಾಕಷ್ಟು ಹಣ ಖರ್ಚು ಮಾಡಿದರೂ ಆದರೆ ಜೀವ ಉಳಿಯಲಿಲ್ಲ ಎನ್ನುವ ನೋವು ಅವರ ಕುಟುಂಬಕ್ಕೆ ಕಾಡುತ್ತಿದೆ.
ನೆರೆಯ ವಿಜಯಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ತದನಂತರ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೆ ಕೊನೆಯುಸಿರೆಳೆದಿದ್ದಾರೆ. ಮಹಾಮಾರಿ ಕೊರೋನಾ ರೋಗದಿಂದ ಮೃತಪಟ್ಟ ಬಗ್ಗೆ ಆಸ್ಪತ್ರೆಯು ರೀಪೋರ್ಟ್ ನೀಡಿದರೂ ಸರಕಾರ ಮಾತ್ರ ಈ ಗ್ರಂಥಪಾಲಕನ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ. ಕೊರೋನಾ ರೋಗಕ್ಕೆ ಮೃತಪಟ್ಟರೆ 30 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಿಸಿದ್ದ ಸರಕಾರದ ಭರವಸೆಯ ಮೇಲೆ ಈ ಬಡ ಕುಟುಂಬ ಅಲ್ಲಿ ಇಲ್ಲಿ ಸುಮಾರು 10 ಲಕ್ಷ ಖಾಸಗಿ ಸಾಲ ಮಾಡಿದ್ದು ಆದರೆ ಸರಕಾರ ಮಾತ್ರ ಈತನ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಮನಸ್ಸು ಮಾಡುತ್ತಿಲ್ಲ ಎನ್ನುವ ನೋವು ಅವರ ಕುಟುಂಬದಲ್ಲಿ ಮನೆಮಾಡಿದೆ.
ಶಾಸಕ ಎಂ.ವೈ. ಪಾಟೀಲರ ಸ್ವಗ್ರಾಮದ ವ್ಯಕ್ತಿಯಾಗಿದ್ದರೂ ಅಲ್ಲದೇ ಶಾಸಕರ ಸ್ವಜಾತಿಯ ಈ ಕುಟುಂಬದ ಪರಿಸ್ಥಿತಿ ಯಾರಿಗೂ ಹೇಳ ತೀರದ್ದಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡದೇ ಶಾಸಕ ಎಂ.ವೈ ಪಾಟೀಲರು ಸರಕಾರದಿಂದ ಪರಿಹಾರ ಕೊಡಿಸಬೇಕು ಅಲ್ಲದೇ ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಗ್ರಂಥಪಾಲಕ ಕೆಲಸ ಕೊಡಿಸಬೇಕು ಎನ್ನುವ ಒತ್ತಾಸೆ ನಮ್ಮದಾಗಿದೆ.