ಕೊರೊನಾ 2ನೇ ಅಲೆ ತಡೆಗಟ್ಟಲು ಶಾಲಾ ಕಾಲೇಜು ಮಾಲ್ ಬಂದಗೆ ಕನ್ನಡ ಭೂಮಿ ಆಗ್ರಹ

ಕಲಬುರಗಿ:ಮಾ.30: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು 2ನೇ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದನ್ನು ತಡೆಗಟ್ಟಲು ಕೂಡಲೇ ಜಿಲ್ಲಾಡಳಿತ ಜನ ಸೇರುವ ಸಿನಿಮಾ ಮಂದಿರಗಳು, ಮಾಲ್ ಗಳು ಸೇರಿದಂತೆ ಶಾಲಾ ಕಾಲೇಜುಗಳನ್ನು ಬಂದ ಮಾಡಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.

ಈಗಾಗಲೇ ದೇಶಾದ್ಯಂತ ಕೊರೊನಾ 2ನೇ ಪ್ರಾರಂಭವಾಗಿದೆ.ದಿನ ನಿತ್ಯ ಸಾವಿರಾರು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.ನೂರಾರು ಕೊರೊನಾ ಪೀಡಿತರು ಸಾವನ್ನಪ್ಪುತ್ತಿದ್ದಾರೆ.ಇದನ್ನು ತಡೆಗಟ್ಟಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ.ರಾಜ್ಯದಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ರಾಜಧಾನಿ ಬೆಂಗಳೂರು ಬಿಟ್ಟರೆ ಕಲಬುರ್ಗಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ.ಜಿಲ್ಲೆಗೆ ಸೋಂಕು ಹೆಚ್ಚಿರುವ ನೆರೆಯ ಮಹಾರಾಷ್ಟ್ರದಿಂದ ಸಾವಿರಾರು ಜನರು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಕಣ್ತಪ್ಪಿಸಿ ನುಸುಳುತ್ತಿದ್ದಾರೆ.ಇದರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ.ಜನಭೀಡ ಪ್ರದೇಶಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.ಸಿನಿಮಾ ಮಂದಿರಗಳಲ್ಲಿ ಸಿನಿಮಾ ನೋಡಲು ನೂಕುನುಗ್ಗಲಾಗುತ್ತಿದೆ.ಮಾಲ್ ಗಳಲ್ಲಿ ಕೊವೀಡ ನಿಯಮಗಳನ್ನು ಗಾಳಿಗೆ ತೂರಿ ಜನರು ಖರೀದಿಗೆ ಮುಗಿಬೀಳುತ್ತಾರೆ.ಇಷ್ಟಾದರೂ ಎಲ್ಲಿಯೂ ತಪಾಸಣಾ ಕಾರ್ಯ ನಡೆಯುತ್ತಿಲ್ಲ.

ಇನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಪಾಲಕರಲ್ಲಿ ಆತಂಕ ಮನೆ ಮಾಡಿದೆ.ಶಾಲಾ ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದಿಲ್ಲ.ಇಲ್ಲಿಯೂ ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ.ಕೂಡಲೇ ಜಿಲ್ಲಾಡಳಿತ ಸೋಂಕು ತಡೆಗಟ್ಟಲು ಶಾಲಾ ಕಾಲೇಜು ಸೇರಿದಂತೆ ಮಾಲ್ ಮತ್ತು ಸಿನಿಮಾ ಮಂದಿರಗಳು ಬಂದ ಮಾಡಿಸಬೇಕು.ಜನ ಸೇರುವ ಕಾರ್ಯಕ್ರಮಗಳಿಗೆ, ಮೆರವಣಿಗೆಗಳಿಗೆ ಅನುಮತಿ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.