ಕೊರೊನಾ ೨ನೇ ಲಸಿಕೆ ಪಡೆದ ಪುತಿನ್!

ಮಾಸ್ಕೋ, ಮಾ.೨೪- ವಿಶ್ವದಾದ್ಯಂತ ಕೊರೊನಾ ಮತ್ತೆ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿರುವ ನಡುವೆಯೇ ಹಲವು ದೇಶಗಳಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಹೆಚ್ಚಿನ ವೇಗ ನೀಡಲಾಗಿದೆ. ಈ ನಡುವೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಎರಡನೇ ಬಾರಿ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಯಾವುದೇ ಕ್ಯಾಮೆರಾಗಳಿಗೆ ಪೋಸ್ ನೀಡದೆ ರಹಸ್ಯವಾಗಿ ವ್ಯಾಕ್ಸಿನ್ ಪಡೆದುಕೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಕಳೆದ ಬಾರಿ ಕೂಡ ವ್ಲಾದಿಮಿರ್ ಪುತಿನ್ ವ್ಯಾಕ್ಸಿನ್‌ನ ಮೊದಲ ಡೋಸ್ ಪಡೆದುಕೊಂಡಿದ್ದರು. ಆದರೆ ಆ ವೇಳೆ ಸುದ್ದಿ ಮಾಧ್ಯಮಗಳ ಕ್ಯಾಮೆರಾಗಳ ಎದುರಲ್ಲೇ ವ್ಯಾಕ್ಸಿನ್ ಪಡೆದು ಶ್ಲಾಘನೆಗೆ ಪಾತ್ರರಾಗಿದ್ದರು. ಆದರೆ ಪುತಿನ್ ಇದೀಗ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದ್ದು, ಆದರೆ ಈ ಬಾರಿ ರಹಸ್ಯವಾಗಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಪುತಿನ್ ಯಾವ ಕಂಪೆನಿಯ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಕೂಡ ಅಲ್ಲಿನ ಸರ್ಕಾರ ಬಹಿರಂಗಪಡಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಸರ್ಕಾರದ ವಕ್ತಾರ ಡಿಮಿತ್ರಿ ಪಶ್ಕೊವ್, ರಶ್ಯಾದ ಎಲ್ಲಾ ಮೂರು ಕೊರೊನಾ ವ್ಯಾಕ್ಸಿನ್‌ಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂಬುದನ್ನು ತೋರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.