ಕೊರೊನಾ ೨ನೇ ಅಲೆ ಆರ್ಭಟ ಸೋಂಕಿತರು ಹೆಚ್ಚಳ

ನವದೆಹಲಿ, ಮಾ.೨೭- ದೇಶದಲ್ಲಿ ಕೋರೊನೊ ಸೋಂಕಿನ ಎರಡನೇ ಅಲೆ ಅರ್ಭಟಿಸತೊಡಗಿದೆ.ನಿತ್ಯ ಸೋಂಕು ಹೆಚ್ಚಳವಾಗುತ್ತಿರುವುದು ಕೇಂದ್ರ ,ರಾಜ್ಯಸರ್ಕಾರಗಳನ್ನು ನಿದ್ದೆಗೆಡಿಸಿದೆ.
ಕಳೆದ ಹಲವು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕು ಏರಿಕೆಯಾಗುವ ಮೂಲಕ ಜನರನ್ನು ಆತಂಕಕ್ಕೆ ಗುರಿ ಮಾಡಿದೆ. ಐದು ತಿಂಗಳ ಬಳಿಕ ದೇಶದಲ್ಲಿ ೬೨,೨೫೮ ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ದೇಶದಲ್ಲಿ ಕಾಣಿಸಿಕೊಂಡಿರುವ ಒಟ್ಟಾರೆ ಸೋಂಕಿನಲ್ಲಿ ಮಹಾರಾಷ್ಟ್ರ ಒಂದರಲ್ಲಿ ೩೬,೯೦೨ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಬೆಚ್ಚಿಬಿದ್ದಿರುವ ಮಹಾರಾಷ್ಟ್ರ, ನಾಳೆಯಿಂದ ಇಡೀ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿ ಮಾಡಲು ನಿರ್ಧರಿಸಿದೆ.
೧೬೦ ದಿನದ ಬಳಿಕ ಹೆಚ್ಚಿನ ಸೋಂಕು ದೇಶದಲ್ಲಿ ಕಾಣಿಸಿಕೊಂಡಿದೆ. ಹೊಸದಾಗಿ ೨೯೧ ಮಂದಿ ಮೃತಪಟ್ಟಿದ್ದು ಡಿಸೆಂಬರ್ ೩೦ ರ ತನಕ ಅತಿ ಹೆಚ್ಚಿನ ಮಂದಿಯ ಸಾವಿನ ಪ್ರಮಾಣ ಇದಾಗಿದೆ. ೩೦,೩೮೬ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆಯ ತನಕ ಕಾಣಿಸಿಕೊಂಡಿರುವ ಒಟ್ಟಾರೆ ಸೋಂಕು ಸೇರಿದಂತೆ ಇದುವರೆಗೆ ೧,೧೯,೦೮,೯೧೦ ಸೋಂಕು ದೃಢಪಟ್ಟಿದೆ. ಇದುವರೆಗೆ ೧,೧೨,೯೫,೦೨೩ ಮಂದಿ ಚೇತರಿಸಿಕೊಂಡಿದ್ದು
೧,೬೧,೨೪೦ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಗುಜರಾತ್, ಪಂಜಾಬ್‌ನಲ್ಲಿ ಅತಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿದ್ದು ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯದಲ್ಲಿ ನಿತ್ಯ ಏರಿಕೆ ಆಳುವ ಸರ್ಕಾರವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಹುಬ್ಬಳಿಗೆ ನಿಷೇಧ:
ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೋಳಿ, ಸೇರಿದಂತೆ ಇನ್ನಿತರೆ ಹಬ್ಬ ಹರಿದಿನಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆಗೆ ಸೂಚನೆ ನೀಡಿದೆ.
ಅದರಲ್ಲಿ ಮಹಾರಾಷ್ಟ್ರ, ದೆಹಲಿ, ಪಂಜಾಬ್, ಮದ್ಯ ಪ್ರದೇಶ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೋಳಿ, ನವರಾತ್ರಿ ಶಾಬ್ -ಇ- ಭಾರತ್ ಸೇರಿದಂತೆ ಇನ್ನಿತರೆ ಹಬ್ಬ ಆಚರಣೆಗೆ ನಿಷೇದ ಹೇರಲಾಗಿದೆ.
ಉನ್ನತ ಮಟ್ಟದ ಸಭೆ:
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಡರಾತ್ರಿ ಉನ್ನತ ಮಟ್ಟದ ಸಭೆ ನಡೆಸಿ ಚಂದಿಗಡ ಮತ್ತು ಛತ್ತೀಸ್ ಗಡಕ್ಕೆ ತಂಡಗಳನ್ನು ಕಳುಹಿಸಿಕೊಟ್ಟು ಸೋಂಕು ನಿಯಂತ್ರಣಕ್ಕೆ ಕ್ರಮ ಮತ್ತು ಸಂಬಂಧಿಸಿದ ಸರ್ಕಾರಕ್ಕೆ ಸೋಂಕು ತಡೆಗೆ ನಿಟ್ಟಿನಲ್ಲಿ ಸಲಹೆ ಸಹಾಯ ಮಾಡಲಿದೆ.
ಮಹಾರಾಷ್ಟ್ರದಲ್ಲಿ ಕಳೆದ ೯ ದಿನಗಳಿಂದ ದಾಖಲೆ ಮಟ್ಟದಲ್ಲಿ ಸೋಂಕು ಏರಿಕೆಯಾಗುತ್ತಿದೆ.ನಿನ್ನೆ ಒಂದೇ ದಿನ ದಾಖಲೆಯ ಪ್ರಮಟಣದಲ್ಲಿ ಸೋಂಕು ಏರಿಕೆಯಾಗಿದೆ.
ರಾಜ್ಯದಲ್ಲಿ ಮೊದಲ ಅಲೆಗಿಂತ ಎರಡನೇಅಲೆ ವೇಗವಾಗಿ ಹರಡುತ್ತಿರುವುದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಆತಂಕ್ಕೆ ಸಿಲುಕಿಸಿದ್ದು ಸೋಂಕು ತಡೆಗೆ ರಾತ್ರಿ ಕರ್ಪ್ಯೂ ಜಾರಿ ಮಾಡಿ ಕಟ್ಟು ನಿಯಮ ಪಾಲನೆಗೆ ಸೂಚಿಸಿದ್ದಾರೆ.

ರಾತ್ರಿ ಕರ್ಪ್ಯೂ ಜಾರಿ
ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಅರ್ಧದಷ್ಟು ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಅನ್ವಯವಾಗುವಂತಹ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಪ್ಯೂ ಜಾರಿ ಮಾಡಲಾಗಿದೆ.
ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯದ ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇಲ್ಲದಿದ್ದರೆ ಲಾಕ್ ಡೌನ್ ಜಾರಿ ಮಾಡಲು ಕೂಡ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

೫ ಲಕ್ಷ ಸನಿಹದಲ್ಲಿ ಸಕ್ರಿಯ ಪ್ರಕರಣ
ದೇಶಗಳಲ್ಲಿ ಕಾಣಿಸಿಕೊಂಡಿರುವ ಒಟ್ಟಾರೆ ಸೋಂಕಿನ ಪೈಕಿ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.
ಸದ್ಯ ೪,೫೨,೬೪೭ ಮಂದಿಯಲ್ಲಿ ಸಕ್ರಿಯ ಪ್ರಕರಣ ಕಾಣಿಸಿಕೊಂಡಿದ್ದು ೫ ಲಕ್ಷ ಸನಿಹದಲ್ಲಿದೆ.
ಫೆಬ್ರವರಿ ಮಧ್ಯ ಭಾಗದವರೆಗೆ ದೇಶದಲ್ಲಿ ೧.೩೫ ಲಕ್ಷ ಸಕ್ರಿಯ ಪ್ರಕರಣಗಳ ಸಂಖ್ಯೆ ೩.೨೦ ಲಕ್ಷ ದಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೫.೮೧ ಕೋಟಿ ಮಂದಿಗೆ ಲಸಿಕೆ
ದೇಶದಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿದೆ. ಇದರ ನಡುವೆ ಲಸಿಕೆ ಹಾಕುವ ಕಾರ್ಯವನ್ನು ಹೆಚ್ಚು ಮಾಡಲಾಗಿದೆ.
ಇದುವರೆಗೆ ೫,೮೧,೦೯,೭೭೩ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮೊದಲ ಮತ್ತು ಎರಡನೇ ಹಂತದ ಲಸಿಕೆ ನೀಡಿಕೆಯನ್ನು ದೇಶದಲ್ಲಿ ಮತ್ತಷ್ಟು ಹೆಚ್ಚು ಮಾಡಲಾಗಿದೆ.