ಕೊರೊನಾ ಹೆಚ್ಚಾಗಲು ಬಿಜೆಪಿ ಅಧಿಕಾರ ದಾಹವೇ ಕಾರಣ

ಚಾಮರಾಜನಗರ, ಮೇ.02- ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡಲು ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರವೇ ಕಾರಣ, ಅವರ ಅಧಿಕಾರ ದಾಹದಿಂದ ಜನ ತತ್ತರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆರೋಗ್ಯ ಹಸ್ತ ಜಿಲ್ಲಾ ಸಹಾಯವಾಣಿ ಉದ್ಘಾಟಿಸಿ ಅವರು ಮಾತನಾಡಿ, ಹಬ್ಬ, ಜಾತ್ರೆಗಳಿಗೆಲ್ಲಾ ಅವಕಾಶ ಕೊಟ್ಟು, ಅಧಿಕಾರ ದಾಹದಿಂದ ಚುನಾವಣೆಯನ್ನು ನಡೆಸಿ, ಕುಂಭಮೇಳಕ್ಕೆ ಅವಕಾಶ ಮಾಡಿಕೊಟ್ಟು ಕೊರೊನಾ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂದು ಜನರ ಸಾವುನೋವಿಗೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆರಂಭವಾದ ಆರೋಗ್ಯ ಹಸ್ತ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬಾರಿ ಕೋವಿಡ್-19ಯ ಮುನ್ನಚ್ಚರಿಕೆಯ ಭಾಗವಾಗಿ 2ಆಲೆ ಬರುತ್ತದೆ. ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಕೋವಿಡ್ ನಿರ್ವಹಣೆ ತಜ್ಞರ ಸಮಿತಿ ವರದಿ ನೀಡಿತ್ತು. ಮುನ್ನಚ್ಚರಿಕೆಯಾಗಿ ಅಸ್ಪತ್ರೆಗೆ ಅಗತ್ಯವಾದ ಬೆಡ್, ಪರಿಕರಗಳು, ಆಕ್ಸಿಜನ್, ವೆಂಟಿಲೇಟರ್ ಸೌಕರ್ಯಗಳು. ವೈದ್ಯರು, ನರ್ಸ್‍ಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ನೇಮಕ ಮಾಡಿಕೊಳ್ಳವಂತೆ ಸೂಚನೆಯನ್ನು ನೀಡಿತ್ತ. ಇದ್ಯಾವುದನ್ನು ಮಾಡದೇ ಮೈಮರೆತ ಕಾರಣದಿಂದಾಗಿ ಸೋಂಕು ಹೆಚ್ಚಳವಾಗುತ್ತದೆ. ಅಲ್ಲದೇ ಸಾವು ನೋವು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವರ ದುರಾಡಳಿತ ಫಲವನ್ನು ರಾಜ್ಯ ಹಾಗು ದೇಶದ ಜನರು ಅನುಭವಿಸುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ ಸಲಹೆಯನ್ನು ಪರಿಗಣಿಸದೇ ಕೇಂದ್ರ ಆರೋಗ್ಯ ಸಚಿವರ ಮೂಲಕ ಉಡಾಫೆ ಪ್ರತಿಕ್ರಿಯೆ ನೀಡಿಸಿದರು. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಕೋರೋನಾ 2 ಆಲೆ ಬರುವ ಮುನ್ನವೇ ದೇಶದ ಎಲ್ಲರಿಗೂ ಸಹ ವ್ಯಾಕ್ಸಿನ್ ದೊರೆಯುವಂತೆ ಮಾಡಲು ಖಾಸಗಿ ಸಹಭಾಗಿತ್ವವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ್ದರು. ಇಂದು ದೇಶದ ಎಲ್ಲರಿಗೂ ವ್ಯಾಕ್ಸಿನ್ ಹಾಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ದೇಶದ ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಇತರೇ ದೇಶಗಳಿಗೆ ರಪ್ತು ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದ ಅವರು, ಮೇ 1 ರಿಂದ 18 ವರ್ಷದ ತುಂಬಿದ ಎಲ್ಲರಿಗೂ ವಾಕ್ಸಿನ್ ಎಂದು ಹೇಳಿದ್ದರು. ಈಗ ಲಸಿಕೆ ಲಭ್ಯವಿಲ್ಲ. ನಂತರ ತಿಳಿಸುತ್ತೇವೆ ಎಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಕೋವಿಡ್ 19 ಎರಡನೇ ಆಲೆಯು ಬಹಳ ಕ್ರೂರವಾಗಿದ್ದು, ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿಯೇ ಈ ಆಲೆ ವ್ಯಾಪಕವಾಗಿ ಹರಡಲು ಪ್ರಧಾನಿ ನರೇಂದ್ರ ಮೋದಿ ನಡೆಸಿದ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಜನರು, ಕುಂಭಮೇಳ ದಲ್ಲಿ ಸೇರಿದ್ದ 50 ಲಕ್ಷ ಮಂದಿ, ಜಾತ್ರೆ ಮತ್ತು ಮದುವೆಯಂತಹ ಶುಭ ಕಾರ್ಯಗಳಿಗೆ ಜನರು ಸೇರಿದಂತೆ ಮಾಡಿದ್ದ ಸರ್ಕಾರ ನೀತಿಯಿಂದ ಜನರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 40 ರಿಂದ 50 ವರ್ಷದವರು ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಅಸ್ಪತ್ರೆಯಲ್ಲಿ ಸೂಕ್ತ ಸವಲತ್ತು ಇಲ್ಲ. ಆರೋಗ್ಯ ಸಿಬ್ಬಂದಿಗಳಿಗೆ ಕಳೆದ ಒಂದು ವರ್ಷದಿಂದ ಸಂಬಳ ನೀಡಿಲ್ಲ. ಇಂಥ ಸರ್ಕಾರಗಳಿಂದ ಉತ್ತಮ ಆರೋಗ್ಯ ಸೇವೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಮೋದಿ ಹಾಗು ಬಿಎಸ್‍ವೈ ಆಡಳಿತ ವಿರುದ್ದ ದ್ರುವನಾರಾಯಣ್ ಕಿಡಿ ಕಾರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಪಕ್ಷದ ನಾಯಕರೇ ಕೊರೊನಾ ಸಂಕಷ್ಟದಲ್ಲೂ ಭ್ರμÁ್ಟಚಾರ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ. ಸರ್ಕಾರದ ಮೇಲಿನ ನಂಬಿಕೆಯೇ ಹೋಗಿದ್ದು ಅವರು ಕೊಡುವ ಕೊರೊನಾ ಸೋಂಕಿತರ ಸಾವು ಹಾಗೂ ಕೇಸ್‍ಗಳ ಸಂಖ್ಯೆಯಲ್ಲೂ ಸಂಶಯ ಮೂಡಿದೆ ಎಂದು ಕಿಡಿಕಾರಿದರು.ಮನಮೋಹನ್ ಸಿಂಗ್ ಅವರನ್ನು ಮೌನಿ ಸಿಂಗ್ ಎಂದು ಟೀಕಿಸುತ್ತಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಭಾರತ ಎಂದೂ ದೈನೆಸಿ ಸ್ಥಿತಿ ತಲುಪಿರಲಿಲ್ಲ. ಇಂದು ಎಲ್ಲಾ ರಾಷ್ಟ್ರಗಳ ನೆರವಿಗೆ ಭಾರತ ಕೈ ಚಾಚುವಂತಾಗಿದೆ. ದೇಶದ ಬಡವರಿಗೆ ಮೊದಲು ಲಸಿಕೆ ಕೊಡುವ ಬದಲು ರಪ್ತು ಮಾಡಲಾಗುತ್ತಿದೆ ಎಂದು ಸರ್ಕಾರದ ನೀತಿಯನ್ನು ಜರಿದರು.ಮೊದಲನೇ ಅಲೆ ಕಳೆದ ಬಳಿಕ ಎರಡನೇ ಅಲೆ ಎದುರಿಸಲು ಸರ್ಕಾರ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು. ಆ ಕೆಲಸಗಳು ಆಗಿಲ್ಲ, ಸಾವಿರಾರು ಕೋಟಿ ರೂ. ವ್ಯಯಿಸಿ ನೂತನ ಸಂಸತ್ ಭವನ ನಿರ್ಮಿಸುತ್ತಿದ್ದಾರೆ. ಈಗ ದೇಶದ ಮೊದಲ ಆದ್ಯತೆ ಆರೋಗ್ಯ ಕಾಪಾಡುವುದು ಎಂಬುದನ್ನೇ ಮರೆತಂತಿದ್ದು, ಅಧಿಕಾರ ದಾಹ, ಹಣದ ಮದದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಆರೋಗ್ಯ ಹಸ್ತ ಸಹಾಯವಾಣಿ ಉದ್ಘಾಟನೆ :
ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷ ಇಂಥ ಸಂಕಷ್ಟದ ಸಮಯದಲ್ಲಿ ಕೈಕಟ್ಟಿ ಕೂರಬಾರದೆಂಬ ಉದ್ದೇಶದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಟಾಸ್ಕ್‍ಪೋರ್ಸ್ ಸಮಿತಿಯನ್ನು ರಚನೆ ಮಾಡಿದ್ದು, ರಾಜ್ಯ ಉಸ್ತುವಾರಿ ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ಜಿಲ್ಲಾವಾರು ಸಮಿತಿಗಳ ಮೂಲಕ ಆರೋಗ್ಯ ಹಸ್ತ ಸಹಾಯವಾಣಿಯನ್ನು ಆರಂಭಿಸಲಾಗಿದೆ. ತಜ್ಞ ವೈದ್ಯರು ಸೋಂಕಿತರಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸಹ ಚಿಕಿತ್ಸೆಗಾಗಿ ವ್ಯವಸ್ಥೆಯನ್ನು ಕಲ್ಪಿಸಲಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಧ್ರುವನಾರಾಯಣ್ ತಿಳಿಸಿದರು.
ಕೆಪಿಸಿಸಿ ವತಿಯಿಂದ ಇಂದು ಆರೋಗ್ಯ ಹಸ್ತ ಸಹಾಯವಾಣಿ ಉದ್ಘಾಟನೆಯಾಗಿದ್ದು, ಮೂವರು ವೈದ್ಯರು ಟೆಲಿ ಮೆಡಿಸಿನ್ ಮೂಲಕ ಕೋವಿಡ್ ಸೋಂಕಿತರಿಗೆ ಮನೋಸ್ಥೈರ್ಯ ಹಾಗೂ ಕೋವಿಡೇತರರಿಗೆ ಆರೋಗ್ಯ ಸಲಹೆ ನೀಡಲಿದ್ದಾರೆ. ಕರೆಗಳನ್ನು ಸ್ವೀಕರಿಸಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಬ್ಬರು ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಆರ್. ಧ್ರುವನಾರಾಯಣ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಸಾವಿನ ಪ್ರಮಾಣವು ಸಹ ಜಾಸ್ತಿಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಸರಿಯಾದ ರೀತಿಯಲ್ಲಿ ಸೋಂಕಿತರನ್ನು ಗುರುತಿಸಲು ವಿಫಲರಾಗಿರುವುದು ಕಾರಣ. ಕಳೆದ ಬಾರಿ ತೆಗೆದುಕೊಂಡು ಮುನ್ನಚ್ಚರಿಕೆ ಕ್ರಮಗಳನ್ನು ಈ ಬಾರಿ ಪಾಲನೆ ಮಾಡಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಸೋಂಕಿತರಿದ್ದು ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇದನ್ನು ಮನಗಂಡು ಡಿಸಿಸಿಯಿಂದ ಆರೋಗ್ಯ ಹಸ್ತ ಆರಂಭಿಸಲಾಗಿದೆ. ತಜ್ಞ ವೈದ್ಯರ ತಂಡ ನಮ್ಮೋಂದಿಗಿರುತ್ತದೆ.. ನಿಮ್ಮ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಲಿದೆ. ವೈದ್ಯರ ತಂಡ :9620492777, 9448326011, 88613338802, 9481817176ಗೆ ಕರೆ ಮಾಡಿದರೆ ವೈದ್ಯರು ತಮಗೆ ಮಾನಸಿಕ ಖಿನ್ನತೆ ಹಾಗು ಚಿಕಿತ್ಸೆ ಬಗ್ಗೆ ಸಲಹೆ ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್ (ಮುನ್ನಾ), ಎ.ಎಸ್. ಗುರುಸ್ವಾಮಿ, ಕೆಪಿಸಿಸಿ ಸದಸ್ಯ ಸೈಯದ್‍ರಫಿ. ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಸೀದ್, ಜಿ.ಪಂ. ಸದಸ್ಯ ಕೆರೆಹಳ್ಳಿ ನವೀನ್, ಪತ್ರಿಕಾ ಕಾರ್ಯದರ್ಶಿ ಅರುಣ್, ದೇವರಾಜು, ಸಿ.ಕೆ. ರವಿಕುಮಾರ್, ಶಿವಮೂರ್ತಿ, ಎಎಚ್‍ಎನ್‍ಖಾನ್ ಮೊದಲಾದವರು ಇದ್ದರು.