ಕೊರೊನಾ ಹೆಚ್ಚಳದಿಂದ ಗರ್ಭಿಣಿಯರಿಗೆ ಮಾರಕ

ಗರ್ಭಧಾರಣೆ ನಂತರದ ಹಂತಗಳಲ್ಲಿ ಮಹಿಳೆಯರು ಕೋವಿಡ್-೧೯ ನೊಂದಿಗೆ ಗಂಭೀರವಾಗಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚಾಗುತ್ತಿದೆ ಮತ್ತು ಅವಧಿಗಿಂತ ಮುನ್ನವೇ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳಿದ್ದು, ದೀರ್ಘಾವಧಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಿದೆ.
ಯಾವುದೇ ಲಕ್ಷಣಗಳಿಲ್ಲದಿದ್ದರೂ ಗರ್ಭ ಧರಿಸಿದ ಮಹಿಳೆಯರಲ್ಲಿ ಮೂರನೇ ಎರಡು ಭಾಗದಷ್ಟು ಜನರಿಗೆ ಕೋವಿಡ್-೧೯ ಪಾಸಿಟಿವ್ ಬಂದಿದೆ. ಈ ಪೈಕಿ ಕೆಲವು ಗರ್ಭಿಣಿಯರು ಕೋವಿಡ್-೧೯ ನಿಂದ ಜೀವಕ್ಕೆ ಕುತ್ತು ತರುವಂತಹ ಅಪಾಯಗಳಿಗೆ ಸಿಲುಕುವ ಸಾಧ್ಯತೆಗಳಿವೆ. ಇವುಗಳಲ್ಲಿ ಪ್ರಮುಖವಾಗಿ ಡಯಾಬಿಟಿಸ್, ರೋಗನಿರೋಧಕ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಹೃದಯ ರೋಗ ಅಥವಾ ಅಸ್ತಮಾದಂತಹ ಸಮಸ್ಯೆಗಳು ಎದುರಾಗಲಿವೆ. ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ (೨೮ ವಾರಗಳಿಗಿಂತ ಅಧಿಕ) ಕೋವಿಡ್-೧೯ ರ ಆರಂಭದೊಂದಿಗೆ ಭ್ರೂಣದ ತೊಂದರೆ, ಪೂರ್ವ ಅವಧಿಯ ಅಂದರೆ ಅವಧಿಗಿಂತ ಮುನ್ನ ಪ್ರಸವ ಮತ್ತು ಪ್ರಸವಕ್ಕೆ ಮುನ್ನ ಮೆಂಬ್ರೇನ್‌ಗಳಲ್ಲಿ ಹಾನಿ ಉಂಟಾಗುವ ಅಪಾಯಗಳು ಹೆಚ್ಚಾಗುತ್ತವೆ. ಒಂದು ವೇಳೆ ಗರ್ಭಿಣಿಯು ಅಧಿಕ ತೂಕ ಹೊಂದಿದ್ದರೆ ಅಥವಾ ೩೫ ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದವರಾಗಿದ್ದರೆ ಕೋವಿಡ್‌ನ ಅಪಾಯ ಹೆಚ್ಚಿರುತ್ತದೆ” ಎಂದು ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನ ಡಾ.ವಿದ್ಯಾ ವಿ.ಭಟ್ ಎಚ್ಚರಿಕೆ ನೀಡಿದ್ದಾರೆ.
“ಕೋವಿಡ್-೧೯ ಪಾಸಿಟಿವ್ ಹೊಂದಿರುವ ತಾಯಂದಿರು ಶಿಶುವಿಗೆ ಹಾಲುಣಿಸುವುದರಿಂದ ಸೋಂಕು ಹರಡುವುದಿಲ್ಲ. ಎದೆಹಾಲು ಕೊರೋನಾ ವೈರಸ್ ಹರಡುವ ಅಪಾಯವನ್ನು ಮೀರಿಸುವ ಗುಣವನ್ನು ಹೊಂದಿರುತ್ತದೆ. ಹಾಲುಣಿಸುವ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಮಧ್ಯೆ ಕೋವಿಡ್-ಪಾಸಿಟಿವ್ ಮಗುವಿಗೆ ಹರಡುವ ಅಪಾಯವಿರುತ್ತದೆ. ಆದರೆ, ಎದೆಹಾಲಿನಲ್ಲಿ ಐಜಿಎ ಆಂಟಿಬಾಡಿಸ್ ಇರುವುದರಿಂದ ಈ ಹಾಲು ಸೋಂಕು ಹರಡುವುದು ಮತ್ತು ಸಾವನ್ನಪ್ಪುವುದನ್ನು ತಡೆಯುತ್ತದೆ” ಎಂದು ಅಭಿಪ್ರಾಯಪಟ್ಟರು.
ಗರ್ಭಿಣಿಯರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಹಿಂಜರಿಕೆ ಬಗ್ಗೆ ಮಾತನಾಡಿದ ಅವರು, “ಗರ್ಭಿಣಿಯರಿಗೆ ಅಥವಾ ಬೆಳೆಯುತ್ತಿರುವ ಮಗುವಿಗೆ ಮಾರಕವಾಗುವಂತಹ ಯಾವುದೇ ಅಂಶವನ್ನು ಈ ಕೋವಿಡ್-೧೯ ಲಸಿಕೆ ಹೊಂದಿರುವುದಿಲ್ಲ. ಗರ್ಭಧಾರಣೆ ನಂತರ ಕೋವಿಡ್-೧೯ ಹೆಚ್ಚು ಅಪಾಯಕಾರಿ ಸಂಕೀರ್ಣತೆಗಳನ್ನು ತಂದೊಡ್ಡುತ್ತದೆ. ಏಕೆಂದರೆ, ಕೆಲವು ಮಹಿಳೆಯರು ಗರ್ಭಧಾರಣೆಯಾದ ೧೨ ವಾರಗಳ ನಂತರ ಅಥವಾ ಲಸಿಕೆ ಪಡೆಯುವಲ್ಲಿ ವಿಳಂಬ ಮಾಡುತ್ತಾರೆ. ಈ ಅವಧಿಯು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅತ್ಯಂತ ಪ್ರಮುಖವಾದ ಸಮಯವಾಗಿರುತ್ತದೆ. ೧೩ ನೇ ವಾರದ ನಂತರ ಯಾವುದೇ ಸಮಯದಲ್ಲಿ ಮೊದಲ ಡೋಸ್ ಲಸಿಕೆಯನ್ನು ಪಡೆಯುವ ನಿರ್ಧಾರವನ್ನು ಕೈಗೊಳ್ಳಬಹುದಾಗಿದೆ” ಎಂದರು.