ಕೊರೊನಾ ಸ್ವನಿಯಂತ್ರಣ ಅತ್ಯವಶ್ಯ: ಸಚಿವ ಜೋಶಿ

ಹುಬ್ಬಳ್ಳಿ ಏ 26 : ಕೊರೊನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು, ಜನರು ಸೋಂಕು ತಡೆಗಟ್ಟಲು ತಾವೇ ಕಟ್ಟುನಿಟ್ಟಿನ ನಿಯಮ ಹಾಕಿಕೊಳ್ಳಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಲಹೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಲ್ಲ ರೀತಿಯ ಸಹಾಯ ಮಾಡಲು ಸಿದ್ದವಿದೆ. ಈಗಾಗಲೇ 1.22 ಲಕ್ಷ ರೆಮ್‍ಡಿಸಿವಿರ್ ನೀಡಿದ್ದೇವೆ. ಕೇಂದ್ರ ಸರ್ಕಾರ ಹೊಸದಾಗಿ 551 ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಅನುಮತಿ ನೀಡಿದೆ ಎಂದರು.
ರಾಜ್ಯದಲ್ಲಿ ಲಾಕ್‍ಡೌನ್ ಬಗ್ಗೆ ತಜ್ಞರು ಏನು ಸಲಹೆ ನೀಡಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ತಜ್ಞರ ವರದಿ ಸರ್ಕಾರದ ಮುಂದಿದೆ. ಸಚಿವ ಸಂಪುಟ ಸಭೆ ನಡೆದಿದ್ದು, ಎಲ್ಲವನ್ನು ಪರಿಶೀಲಿಸಿ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಕೇಂದ್ರ ಸಹಕಾರ ನೀಡುತ್ತದೆ ಎಂದರು.
ಕೊರೊನಾ ಸೋಂಕಿತರಿಗಾಗಿ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ 300 ಆಕ್ಸಿಜನ್ ಬೆಡ್ ಹಾಗೂ ಧಾರವಾಡದಲ್ಲಿ 125 ಬೆಡ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಬೆಡ್ ಸಮಸ್ಯೆ ಇಲ್ಲ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ತೊಂದರೆಯಾಗದಂತೆ ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ನಿಯಮ ಪ್ರಕಾರ ಬೆಡ್ ನೀಡಬೇಕು. ಈ ಬಗ್ಗೆ ಮಾತುಕತೆ ಕೂಡ ಮಾಡಿದ್ದೇವೆ ಎಂದು ಸಚಿವ ಜೋಶಿ ತಿಳಿಸಿದರು.