ಕೊರೊನಾ ಸ್ಫೋಟ: ಒಂದೇ ದಿನ ೧೧೯೯ ಮಂದಿಗೆ ಸೋಂಕು!

ತುಮಕೂರು, ಏ. ೨೨- ಕಲ್ಪತರುನಾಡಿನಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು, ನಿನ್ನೆ ಒಂದೇ ದಿನ ೧೧೯೯ ಮಂದಿಗೆ ಸೋಂಕು ವಕ್ಕರಿಸುವ ಮೂಲಕ ಜನರನ್ನು ತೀವ್ರ ಭಯಭೀತಿಗೊಳಿಸಿದೆ.
ತುಮಕೂರು ತಾಲ್ಲೂಕೊಂದರಲ್ಲೇ ೬೩೭ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲ ಸೋಂಕಿತರ ಸಂಖ್ಯೆ ೩೨,೮೩೭ಕ್ಕೆ ಏರಿಕೆಯಾಗಿದೆ. ಇದಲ್ಲದೆ ಸಕ್ರಿಯ ಪ್ರಕರಣಗಳು ನಿರಂತರವಾಗಿ ಹೆಚ್ಚಳವಾಗುತ್ತಲೇ ಇದ್ದು, ಜಿಲ್ಲೆಯಲ್ಲಿ ೫೦೨೦ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಜತೆಗೆ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯ ೩೮ ವರ್ಷದ ಪುರುಷ, ಗುಬ್ಬಿ ತಾಲ್ಲೂಕು ಮಾರುತಿ ನಗರದ ೬೪ ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೨೭೫ಕ್ಕೇರಿದೆ.
ನಿನ್ನೆ ವರದಿಯಾಗಿರುವ ೧೧೯೯ ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕು ೬೩೭, ಚಿಕ್ಕನಾಯಕನಹಳ್ಳಿ ತಾಲ್ಲೂಕು ೫೬, ಗುಬ್ಬಿ ತಾಲ್ಲೂಕು ೧೦೯, ಕೊರಟಗೆರೆ ತಾಲ್ಲೂಕು ೨೭, ಕುಣಿಗಲ್ ತಾಲ್ಲೂಕು ೭೪, ಮಧುಗಿರಿ ತಾಲ್ಲೂಕು ೪೮, ಪಾವಗಡ ತಾಲ್ಲೂಕು ೬೫, ಸಿರಾ ತಾಲ್ಲೂಕು ೩೫, ತಿಪಟೂರು ತಾಲ್ಲೂಕು ೯೯ ಹಾಗೂ ತುರುವೇಕೆರೆ ತಾಲ್ಲೂಕಿ ೪೯ ಜನರಿಗೆ ಸೋಂಕು ತಗುಲಿದೆ.