ಕೊರೊನಾ ಸ್ಥಿತಿಗತಿ ಶ್ವೇತ ಪತ್ರಕ್ಕೆ ಸಿದ್ದು ಆಗ್ರಹ

ಬೆಂಗಳೂರು, ಮಾ. ೨೭- ಕೊರೊನಾ ಸೋಂಕಿನ ಚಿಕಿತ್ಸೆ, ಸಾವು, ಖರ್ಚು, ವೆಚ್ಚ ಎಲ್ಲದರ ಬಗ್ಗೆಯೂ ಶ್ವೇತಪತ್ರ ಹೊರಡಿಸುವಂತೆ ವಿರೋಧ ಪಕ್ಷದ ನಾಯಕಸಿದ್ಧರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೊರೊನಾಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳಿದೆ. ಹಾಗಾಗಿ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದರು.
ಕೊರೊನಾ ಖರ್ಚು ವೆಚ್ಚ ಎಲ್ಲದರ ಬಗ್ಗೆ ಭ್ರಷ್ಟಾಚಾರ ನಡೆದಿದೆ ಎಂದು ದೂರಿರುವ ಅವರು, ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ ಎಂದು ಟ್ವೀಟರ್‌ನಲ್ಲಿ ಆರೋಪಿಸಿದ್ದಾರೆ.
ಕೊರೊನಾ ಸಾವಿನ ಬಗ್ಗೆ ಮಾತ್ರ ಸುಳ್ಳು ಹೇಳುತ್ತಿಲ್ಲ. ಔಷಧಿ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್‌ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿವರೆಗೂ ಎಲ್ಲದರಲ್ಲೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಎಂದು ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.
ಕೊರೊನಾ ಸೋಂಕನ್ನು ಔಷಧಿ ಚಿಕಿತ್ಸೆಯಿಂದಲೇ ಗೆಲ್ಲಬೇಕೆ ಹೊರತು ಸುಳ್ಳುಗಳಿಂದ ಅಲ್ಲ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೊರೊನಾ ಸೋಂಕು ಉಲ್ಬಣಕ್ಕೆ ಬಿಜೆಪಿ ಸರ್ಕಾರದ ಅಸಮರ್ಥ್ಯ , ಭ್ರಷ್ಟಾಚಾರ ಮತ್ತು ಸುಳ್ಳುಗಳು ಕಾರಣ ಎಂದು ಈ ಮೊದಲೇ ಹೇಳಿದ್ದೆ. ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಲಜ್ಜೆಗೇಡಿತನದಿಂದ ನಡೆದುಕೊಂಡಿದ್ದು, ರಾಜ್ಯದ ಜನ ತೊಂದರೆ ಅನುಭವಿಸುವಂತಾಗಿದೆ ಎಂದು ಸಿದ್ಧರಾಮಯ್ಯ ಟ್ವೀಟರ್‌ನಲ್ಲಿ ಹೇಳಿದ್ದಾರೆ.
ರಾಜ್ಯದ ಆರೋಗ್ಯ ಇಲಾಖೆ ದಾಖಲೆಗ ಪ್ರಕಾರ ೨೦೨೦ರ ಡಿಸೆಂಬರ್ ವರೆಗೆ ಕೊರೊನಾ ಸಾವಿನ ಸಂಖ್ಯೆ ೧೨೦೯೦ ಆದರೆ, ಯೋಜನಾ ಮತ್ತು ಅಂಕಿ ಅಂಶಗಳ ಇಲಾಖೆಯ ಪ್ರಕಾರ ಈ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ ೨೨,೩೨೦ ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಹೇಳಿ ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.