ಕೊರೊನಾ ಸೋಂಕು ಹೆಚ್ಚಳ ಮಾರ್ಗಸೂಚಿ ಪಾಲನೆಗೆ ಸಲಹೆ

ಕೋಲಾರ,ಏ.೨: ಇತ್ತೀಚಿಗೆ ಕೋರೊನ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಕಾರ್ಮಿಕರು, ಅಮಾಲಿಗಳು ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಸಲಹೆ ನೀಡಿದರು.
ನಗರದ ಎಪಿಎಂಸಿ ಪ್ರಾಗಂಣದಲ್ಲಿ ಕಾರ್ಮಿಕರಿಗೆ, ಹಮಾಲಿಗಳಿಗೆ ಹಾಗೂ ರೈತರಿಗೆ ತಂಪು ಪಾನೀಯ ವಿತರಿಸಿ ಮಾತನಾಡಿ, ದೇಶ, ರಾಜ್ಯದಲ್ಲಿ ಕೋರೊನ ಎರಡನೇ ಅಲೆ ಪ್ರಾರಂಭವಾಗಿದ್ದು, ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಳೆದ ವರ್ಷವೂ ಇಂತಹ ಪರಿಸ್ಥಿತಿಯಲ್ಲಿ ಕೋರೊನ ಸೋಂಕಿತರು ಪತ್ತೆಯಾದರು. ಇದರ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಕಾರ್ಮಿಕರು ಒಂದೊತ್ತು ಊಟಕ್ಕೂ ಪರದಾಡಬೇಕಾಯಿತು. ಅವರ ಹಸಿವನ್ನು ನಿಗಿಸಲು ಊಟದ ವ್ಯವಸ್ಥೆ ಮಾಲಾಯಿತು. ಇದರ ಜೊತೆಗೆ ತಂಪುಪಾನೀಯಗಳನ್ನು ವಿತರಿಸಲಾಯಿತು ಎಂದರು.
ರಾಜ್ಯ ಬೀಜ ನಿಗಮ ಮಂಡಳಿ ನಿರ್ದೇಶಕ ವಡಗೂರು ನಾಗರಾಜ್ ಮಾತನಾಡಿ, ಕೋರೊನ ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರೆ ಬೇರಸವಾಗುತ್ತದೆ. ಈಗ ಹರಡುತ್ತಿರುವ ವೈರಸ್ ಕೋವಿಡ್‌ಗಿಂತ ಅಪಾಯವಾಗಿದೆ. ಇದರಿಂದಾಗಿ ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಹಿಂದೆ ಕುರ್ಕಿ ರಾಜೇಶ್ವರಿ ಅವರು ಎಪಿಎಂಸಿ ಅಧ್ಯಕ್ಷೆಯಾಗಿದ್ದಾಗ ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಿದರು. ಸರ್ಕಾರದ ಮೇಲೆ ಒತ್ತಡ ಹಾಕಿ ಅದಾಯ ಹೆಚ್ಚಿಸಲು ಕಾರ್ಯಕ್ರಮ ರೂಪಿಸಿದರು. ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರ ಗುರಿ ಸಾಧನೆಯಾಗಲಿ ಎಂದು ಆಶಿಸಿದರು.
ಮಾಜಿ ಅಧ್ಯಕ್ಷ ವೆಂಕಟೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಬೇಸಿಗೆ ಕಾಲ ಆರಂಭವಾಗಿದ್ದು, ಬಿಸಿಲಿನ ತಾಪ ಹೆಚ್ಚಾಗಿದೆ. ಇದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಜನ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಕುರ್ಕಿ ರಾಜೇಶ್ವರಿ ಅವರು ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹವರಿಗೆ ರಾಜಕೀಯವಾಗಿ ಶಕ್ತಿ ತುಂಬಿದರೆ ನಿರಂತರವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕರಾದ ದೇವರಾಜ್, ಅಪ್ಪಯ್ಯಪ್ಪ, ಮಂಜುನಾಥ್, ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಮಾಜಿ ನಿರ್ದೇಶಕ ಬಣಕನಹಳ್ಳಿ ನಟರಾಜ್, ಮಂಡಿ ಮಾಲೀಕರಾದ ರಾಮಸ್ವಾಮಿ, ವೆಂಕಟೇಗೌಡ, ಮುಖಂಡ ಕುರ್ಕಿ ಬುಜ್ಜಿ ಹಾಜರಿದ್ದರು.