ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುವ ಸಾಧ್ಯತೆ: ಉಡುಪಿ ಡಿಸಿ

ಉಡುಪಿ, ಎ.೨೪- ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೋವಿಡ್-೧೯ ಸೋಂಕಿಗೆ ಪಾಸಿಟಿವ್ ಬರುವವರ ಸಂಖ್ಯೆ ಕಳವಳಕಾರಿ ರೀತಿಯಲ್ಲಿ ಹೆಚ್ಚುತಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಏರಿಕೆ ಗತಿಯಲ್ಲಿ ಸಾಗುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ಜಿಲ್ಲೆಯ ಜನತೆ ಕೊರೋನ ಕುರಿತಂತೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ವಾರಾಂತ್ಯ ಕರ್ಫ್ಯೂ ಹಾಗೂ ಪ್ರಸಕ್ತ ಜಿಲ್ಲೆಯಲ್ಲಿ ಕೊರೋನ ಸ್ಥಿತಿಗತಿ ಕುರಿತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಕೋವಿಡ್ ಎರಡನೇ ಅಲೆಗೆ ಮುನ್ನ ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವಿಟಿ ಪ್ರಮಾಣ ಶೇ.೨.೫ ಆಗಿತ್ತು. ೧೫ ದಿನಗಳ ಹಿಂದೆ ಇದು ಶೇ.೫.೪೫ಕ್ಕೇರಿತ್ತು. ಒಂದು ವಾರದ ಹಿಂದೆ ಪಾಸಿಟಿವಿ ಪ್ರಮಾಣ ಶೇ.೭.೭೨ಕ್ಕೇರಿ, ಮೂರು ದಿನಗಳಿಂದ ಶೇ.೧೦.೫೦ಗೆ ನೆಗೆದಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದವರು ವಿವರಿಸಿದರು. ೧೫ ದಿನಗಳಿಗೆ ಮೊದಲು ಪ್ರತಿದಿನ ೫೦ ಮಂದಿ ಪಾಸಿಟಿವ್ ಬರುತಿದ್ದರೆ, ಒಂದು ವಾರದಿಂದ ಇದು ೧೦೦ಕ್ಕೇರಿತ್ತು. ಕಳೆದ ಮೂರು ದಿನಗಳಿಂದ ಒಟ್ಟು ೯೨೬ ಮಂದಿ ಪಾಸಿಟಿವ್ ಬಂದಿದ್ದು, ದಿನದ ಸರಾಸರಿ ೩೦೦ ದಾಟಿದೆ. ಇದು ಅತ್ಯಂತ ಕಳವಳಕರ ವಿಷಯ. ಇದೀಗ ಈ ಹೆಚ್ಚಳಕ್ಕೆ ನಾವು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದರು. ಆದರೆ ಜನತೆ ಕೊರೋನ ಕುರಿತಂತೆ ಜಾಗೃತಿಯನ್ನು ವಹಿಸಬೇಕು. ರೋಗದ ಲಕ್ಷಣ ಕಾಣಿಸಿದಾಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಹಾಸಿಗೆಗಳಿಗೆ ಯಾವುದೇ ಕೊರತೆ ಇಲ್ಲ. ಐಸಿಯು ಹಾಗೂ ವೆಂಟಿಲೇಟರ್ ಬೆಡ್ ಎಲ್ಲವೂ ಲಭ್ಯವಿದೆ ಎಂದವರು ನುಡಿದರು. ಸದ್ಯ ಜಿಲ್ಲೆಯಲ್ಲಿ ೧೧೬೫ ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ. ಇವರಲ್ಲಿ ೨೮೦ ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿ ದ್ದಾರೆ. ತಿಂಗಳ ಮೊದಲು ಶೇ.೫ರಷ್ಟು ಮಂದಿ ಸೋಂಕಿತರು ಮಾತ್ರ ರೋಗ ಲಕ್ಷಣ ಹೊಂದಿದ್ದರೆ, ಈಗ ಈ ಸಂಖ್ಯೆ ಶೇ.೨೫ಕ್ಕೇರಿದೆ. ಮುಂದೆ ಇದು ಶೇ.೪೦ಕ್ಕೆ ಏರುವ ಲಕ್ಷಣ ಕಂಡುಬರುತ್ತಿದೆ. ಆದರೂ ಸದ್ಯಕ್ಕೆ ಜಿಲ್ಲೆಯಲ್ಲಿ ೧೩ ವೆಂಟಿಲೇಟರ್, ೩೫ ಐಸಿಯು ಬೆಡ್ ಹಾಗೂ ೬ ಎಚ್‌ಎಫ್‌ಎನ್‌ಸಿ ಮಾತ್ರ ಭರ್ತಿಯಾಗಿವೆ ಎಂದು ಜಿ.ಜಗದೀಶ್ ನುಡಿದರು. ಈ ವರ್ಷದ ಜನವರಿ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೇವಲ ನಾಲ್ಕು ಕೋವಿಡ್ ಸಾವು ಸಂಭವಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಐಸಿಯು ಬೇಡಿಕೆ ಜಾಸ್ತಿಯಾಗುವ ಸಾಧ್ಯತೆ ಇದೆ. ಐಸಿಯು ಬೆಡ್ ಬೇಡಿಕೆ ಹೆಚ್ಚಾದರೆ ಸಾವಿನ ಪ್ರಮಾಣವೂ ಏರುವ ಸಾಧ್ಯತೆ ಇರುತ್ತದೆ. ಆದುದರಿಂದ ಸರಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಅಲ್ಲೂ ಶೇ.೫೦ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾದಿರಿಸಲು ಸೂಚಿಸಲಾಗಿದೆ ಎಂದರು. ನಮ್ಮಲ್ಲೀಗ ಸರಕಾರಿ ವ್ಯವಸ್ಥೆಯಲ್ಲಿ ೪೧ ಐಸಿಯು ಬೆಡ್‌ಗಳು, ೪೬ ವೆಂಟಿಲೇಟರ್ ಬೆಡ್, ೧೨ ಎಚ್‌ಎಫ್‌ಎನ್‌ಸಿ ಹಾಗೂ ೪೮೦ ಆಕ್ಸಿಜನ್ ಬೆಡ್‌ಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ೬೨೯ ಆಕ್ಸಿಜನ್ ಬೆಡ್, ೪೨೮ ಸಾಮಾನ್ಯ ಬೆಡ್, ೧೦೦ ಐಸಿಯು ಬೆಡ್ ಹಾಗೂ ೧೩ ಎಚ್‌ಎಫ್‌ಎನ್‌ಸಿ ಬೆಡ್‌ಗಳಿವೆ. ಇವುಗಳಲ್ಲಿ ೪೯ ಆಕ್ಸಿಜನ್ ಬೆಡ್, ೧೫೮ ಸಾಮಾನ್ಯ ಬೆಡ್, ೨೭ ಎಚ್‌ಡಿಯು, ೪೪ ಐಸಿಯು ಹಾಗೂ ೮ ಎಚ್‌ಎಫ್‌ಎನ್‌ಸಿ ಬೆಡ್‌ಗಳು ಭರ್ತಿಯಾಗಿವೆ ಎಂದವರು ಹೇಳಿದರು. ಉಡುಪಿ ಜಿಲ್ಲೆಯಲ್ಲಿ ಈಗ ಪ್ರತಿದಿನ ೩೦೦೦ ಕೋವಿಡ್ ಪರೀಕ್ಷೆಗಳಾಗುತ್ತಿವೆ. ಇಡೀ ರಾಜ್ಯದಲ್ಲಿ ಅತ್ಯಧಿಕ ಪರೀಕ್ಷೆ ನಡೆಸುತ್ತಿರುವ ಹೆಗ್ಗಳಿಕೆ ಉಡುಪಿ ಜಿಲ್ಲೆಗಿದೆ. ಇದರಿಂದ ರೋಗವನ್ನು ಬೇಗ ಪತ್ತೆ ಹಚ್ಚಿ ತ್ವರಿತವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿ. ಜಿಲ್ಲೆಯ ಲ್ಲೀಗ ಕಾರ್ಕಳದ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಒಂದು ಮಾತ್ರ ಕಂಟೈನ್‌ಮೆಂಟ್ ವಲಯವಾಗಿದೆ. ಮಣಿಪಾಲದ ಎಂಐಟಿಯನ್ನು ಈಗಾಗಲೇ ಡಿನೊಟಿಫೈ ಮಾಡಲಾಗಿದೆ ಎಂದರು. ಸದ್ಯ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ಎರಡು ಮಹಡಿಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಡಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಉಳಿದೆರಡು ಮಹಡಿಗಳನ್ನು ನೀಡುವ ಬಗ್ಗೆ ಸಹಮತ ಸೂಚಿಸಿದ್ದಾರೆ. ಮಣಿಪಾಲದಲ್ಲೂ ಸದ್ಯ ಕೋವಿಡ್ ರೋಗಿಗಳ ಚಿಕಿತ್ಸೆಗೆ ೨೦ ಬೆಡ್ ಹಾಗೂ ಐಸಿಯು ಬೆಡ್ ನೀಡಿದ್ದಾರೆ. ಮುಂದೆ ಬೇಡಿಕೆ ಹೆಚ್ಚಾದಂತೆ ೨೦೦ ಬೆಡ್‌ಗಳನ್ನು ನೀಡುವ ಭರವಸೆ ಆಡಳಿತ ಮಂಡಳಿಯಿಂದ ಸಿಕ್ಕಿದೆ ಎಂದು ಜಗದೀಶ್ ನುಡಿದರು. ಸದ್ಯಕ್ಕೆ ಜಿಲ್ಲೆಯಲ್ಲಿ ಐಸಿಯು ಬೆಡ್‌ಗಳ ಕೊರತೆ ಇಲ್ಲ. ಬೇಕಷ್ಟು ಲಭ್ಯವಿದೆ. ಆದರೆ ಜನರು ಕೋವಿಡ್ ಲಕ್ಷಣ ಕಂಡಾಕ್ಷಣ ಪರೀಕ್ಷೆಗೊಳಪಟ್ಟು ಚಿಕಿತ್ಸೆಗೆ ಬರಬೇಕು. ಆಗ ಮಾತ್ರ ತ್ವರಿತ ಚಿಕಿತ್ಸೆಯಿಂದ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಪೊಲೀಸ್ ವೈದ್ಯಾಧಿಕಾರಿ ವಿಷ್ಣುವರ್ಧನ್, ಎಡಿಸಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ಕೆ.ರಾಜು ಉಪಸ್ಥಿತರಿದ್ದರು.