ಕೊರೊನಾ ಸೋಂಕಿತ ಆರೈಕೆದಾರರಿಗೆ ಒತ್ತಡ ನಿರ್ವಹಣೆ ಸಲಹೆ

ಧಾರವಾಡ, ಜೂ:5: ಡಿಮ್ಹಾನ್ಸ್ ಸಂಸ್ಥೆಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೊಂಕಿತರ ಆರೈಕೆದಾರರಿಗೆ ಕೊರೊನಾ ಮುಂಜಾಗ್ರತೆ ಕುರಿತು ಅರಿವನ್ನು ಮೂಡಿಸಲಾಯಿತು.
ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ.ಆದಿತ್ಯ ಪಾಂಡುರಂಗಿಯವರು ಕೊರೊನಾ ಸೋಂಕಿತ ಆರೈಕೆದಾರರಿಗೆ ಕೊರೊನಾ ರೋಗದ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.ಕೊರೊನಾ ಸೋಂಕಿತ ಆರೈಕೆದಾರರು ಒತ್ತಡ ನಿರ್ವಹಣೆಯನ್ನು ಪ್ರಸ್ತುತ ಸಂದರ್ಭದಲ್ಲಿ ಹೇಗೆ ನಿರ್ವಹಿಸಬೇಕೆಂದು ಸಲಹೆ ನೀಡಿದರು. ಪ್ರಸ್ತುತ ಕೊರೊನಾ ರೋಗಿಗಳಿಗೆ ಅವರ ಮನೆಯವರಿಂದಲೂ ಪೂರ್ಣ ಸಹಕಾರ ಬೇಕಾಗುತ್ತದೆ. ರೋಗಿಗಳಿಗೆ ಕೊರೊನಾ ರೋಗದಿಂದ ಹೊರಬರಲು ಮಾನಸಿಕ ಸ್ಥೈರ್ಯ ಸಿಕ್ಕಂತಾಗುತ್ತದೆ.
ಕೊರೊನಾ ಸೋಂಕಿತ ರೋಗಿಗಳನ್ನು ಪೂರ್ಣ ಗುಣಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಈಗಾಗಲೇ ಕೊರೊನಾ ರೋಗವನ್ನು ಗೆದ್ದು ಆಸ್ಪತ್ರೆಯಿಂದ ಬಿಡುಗಡೆ ಆದ ರೋಗಿಗಳ ಉದಾಹರಣೆಯನ್ನು ನೀಡಿದರು. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಆರೋಗ್ಯ ಸ್ಥಿತಿಯ ಬಗ್ಗೆ ವಿವರವಾಗಿ ಅವರ ಸಂಬಂಧಿಕರಿಗೆ ವಿವರಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯಕರ್ತ ಅಶೋಕ ಕೋರಿ ಮಾತನಾಡಿ, ಕೊರೊನಾ ಸೋಂಕು ಬರದಂತೆ ಕುಟುಂಬದಲ್ಲಿರುವ ಪ್ರತಿಯೊಬ್ಬರು ಜಾಗೃತೆ ವಹಿಸಿ ಕೊರೊನಾ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಡಿಮ್ಹಾನ್ಸ್ ಸಂಸ್ಥೆಯ ಡಾ.ಶ್ರೀಧರ್ ಕುಲಕರ್ಣಿ ಮಾತನಾಡಿ, ಕೋರೊನಾ ಸೋಂಕಿತ ಆರೈಕೆದಾರರಿಗೆ ಸಂಗೀತ ಚಿಕಿತ್ಸೆ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕುರಿತು ಸಲಹೆ ಸೂಚನೆ ನೀಡಿದರು. ಹಾಗೂ ಪ್ರಾರ್ಥನೆಗಳನ್ನು ಪ್ರಸ್ತುತ ಪಡಿಸಿದರು.
ರೋಗಿಗಳ ಸಂಬಂಧಿಕರು ಕೊರೊನಾ ಚಿಕಿತ್ಸೆ ನೀಡುತ್ತಿರುವ ಡಿಮ್ಹಾನ್ಸ್ ಸಂಸ್ಥೆಯ ತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದರು. ಡಿಮ್ಹಾನ್ಸ್ ಸಂಸ್ಥೆಯ ತಂಡವು ಆರೈಕೆದಾರರಿಗೆ ಬೇಕಾದ ಮಾಹಿತಿಯನ್ನು ತಾಳ್ಮೆಯಿಂದ ಕೊಡುತ್ತಿದ್ದಾರೆಂದು ಸಮಾಧಾನ ವ್ಯಕ್ತಪಡಿಸಿದರು.