ಕೊರೊನಾ ಸೋಂಕಿತರು ಕರೆದರೇ ನಾನು ಹೋಗುವುದನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ

ನಿರಂತರ ಒತ್ತಡದ ಪರಿಣಾಮ ಆಕ್ಸಿಜನ್, ಔಷಧಿ ಸೌಲಭ್ಯ ಸುಧಾರಣೆ
ರಾಯಚೂರು.ಮೇ.28- ಕೊರೊನಾ ಚಿಕಿತ್ಸೆ ಮತ್ತು ಆಸ್ಪತ್ರೆಯ ಸೌಲಭಕ್ಕಾಗಿ ಜನ ಕರೆದರೇ ಹೋಗುವುದು ನಿಶ್ಚಿತ. ನನ್ನನ್ನು ತಡೆಯಲು ಯಾವ ಶಕ್ತಿಯಿಂದ ಸಾಧ್ಯವಿಲ್ಲವೆಂದು ರವಿ ಬೋಸರಾಜು ಅವರು ಹೇಳಿದರು.
ಅವರಿಂದು ಪಕ್ಷದ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮೇ.06 ರಂದು ನವೋದಯ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಪ್ರಕರಣ ಎಚ್ಚರಿಕೆಯ ಘಂಟೆಯಾಗಿತ್ತು. ಅಂದು ನಾನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಧರಣಿ ಹೂ‌ಡುವ ಉದ್ದೇಶ ರಾಜಕೀಯ ಮಾಡುವುದಾಗಿರಲಿಲ್ಲ. ಜಿಲ್ಲಾಡಳಿತ ಮತ್ತು ಸರ್ಕಾರದ ಮೇಲೆ ಒತ್ತಡವೇರುವುದಷ್ಟೇ ನನ್ನ ಉದ್ದೇಶವಾಗಿತ್ತು. ಈ ಒತ್ತಡದಿಂದ ಇಂದು ಆಕ್ಸಿಜನ್ ಟ್ಯಾಂಕ್ ಅಳವಡಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ.
ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಗೆ ತೆರಳಿ ಅಲ್ಲಿ ಕೊರೊನಾ ಸೋಂಕಿತರೊಂದಿಗೆ ಸಾಧಕ, ಬಾಧಕ ಅರಿತು ಅಲ್ಲಿಯ ಕೊರತೆಗಳ ಬಗ್ಗೆ ಒತ್ತಡವೇರಿದ್ದರಿಂದ ಅನೇಕರಿಗೆ ಚಿಕಿತ್ಸೆ ಮತ್ತು ರೆಮ್‌ಡಿಸಿವಿರ್ ಮುಂತಾದ ಸೌಲಭ್ಯ ದೊರೆಯಲು ಸಾಧ್ಯವಾಯಿತು. ಕೊರೊನಾ ಸೋಂಕಿತರ ಬಳಿ ತೆರಳಿದರೇ ಅದರ ಪರಿಣಾಮ ಏನೆಂದು ನನಗೆ ಗೊತ್ತು. ಆದರೆ, ಜನ ತಮ್ಮ ಕಷ್ಟಕ್ಕಾಗಿ ಕರೆಯುತ್ತಿದ್ದಾಗ ಹೋಗದಿರಲು ಸಾಧ್ಯವಾಗುವುದೇ?. ಡಾ.ಶಿವರಾಜ ಪಾಟೀಲ್ ಒಬ್ಬ ಶಾಸಕರಾಗುವ ಮುಂಚೆ ಒಬ್ಬ ವೈದ್ಯರು. ನಿಜವಾಗಿಯೂ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ಅರಿಯಬೇಕಾಗಿತ್ತು.
ನಾವು ಒತ್ತಡ ಹಾಕುವವರೆಗೂ ಉಸ್ತುವಾರಿ ಸಚಿವರು ಜಿಲ್ಲೆಯ ಮುಖ ನೋಡಿರಲಿಲ್ಲ. ಏಪ್ರೀಲ್ 28 ಮೊದಲ ಭೇಟಿಯ ಸಂದರ್ಭದಲ್ಲಿ ಕೇವಲ ಕಾಟಾಚಾರಕ್ಕೆ ಸಭೆ ನಿರ್ವಹಿಸಿದ್ದರು. ಇಲ್ಲಿಯ ಸಮಸ್ಯೆಗಳ ಬಗ್ಗೆ ಹೆಚ್ಚು ಹೆಚ್ಚು ಸರ್ಕಾರದ ಗಮನ ಸೆಳೆದಾಗ ಪರಿಸ್ಥಿತಿ ಸುಧಾರಣೆಯಾಗಿದೆ. ಇಂದು ಕೊರೊನಾ ಸೋಂಕಿತರ ಸಂಖ್ಯೆ ಸಾಕಾಷ್ಟು ಇಳಿಮುಖವಾಗಿರುವುದು ಸಮಾಧಾನಕರವಾಗಿದೆ. ಆದರೆ, ಮತ್ತೊಂದು ಅಲೆಯ ಆತಂಕದ ಬಗ್ಗೆಯೂ ಎಚ್ಚರವಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಿಮ್ಸ್ ಮತ್ತು ಓಪೆಕ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಹಾಗೂ ಇನ್ನಿತರ ತಾಂತ್ರಿಕ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರೆಲ್ಲರ ಪ್ರಯತ್ನದಿಂದಲೇ ಕೊರೊನಾ ನಿಯಂತ್ರಣಕ್ಕೆ ಸಾಧ್ಯವಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಇಂದಿಗೂ ಸಹ ಸೋಂಕಿತರ ವಿವಿಧ ಪರೀಕ್ಷೆಗಳ ವ್ಯವಸ್ಥೆಯಿಲ್ಲ. ಶಾಸಕರು ಈ ಬಗ್ಗೆ ಗಮನ ಹರಿಸಿ, ಹೋರಾಟ ನಡೆಸುವ ಅಗತ್ಯವಿತ್ತು. ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಸ್ತವ್ಯಸ್ತವಾಗಿತ್ತೆಂದು ಸ್ವತಃ ಬಿಜೆಪಿ ಶಾಸಕರಾದ ಕೆ.ಶಿವನಗೌಡ ನಾಯಕ ಅವರು ತಮ್ಮ ಅಸಮಾಧಾನವನ್ನು ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ತೋಡಿಕೊಂಡಿದ್ದರು. ಅಂದರೇ, ನಾವು ಮಾಡುವ ಹೋರಾಟ ಸರಿಯಿತ್ತು ಎನ್ನುವುದಕ್ಕೆ ಇವರ ಹೇಳಿಕೆ ಸಾಕ್ಷಿ. ಆದರೆ, ಡಾ.ಶಿವರಾಜ ಪಾಟೀಲ್ ಅವರು ಮಾತ್ರ ಎಲ್ಲವೂ ಸರಿಯಿದೆಂದು ಹೇಳಿರುವುದು ಇಬ್ಬರು ಶಾಸಕರಲ್ಲಿ ಯಾರು ಸತ್ಯ, ಯಾರು ಸುಳ್ಳು ಎಂದು ಜನ ತೀರ್ಮಾನಿಸಬೇಕಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆಗಳನ್ನು ಮುಚ್ಚಿಡಲಾಗುತ್ತಿದೆ. ಅನೇಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಆದರೆ, ಅತ್ಯಂತ ಕಡಿಮೆ ಸಂಖ್ಯೆಯನ್ನು ತೋರಿಸಲಾಗುತ್ತಿದೆ. ನಾವು ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕೆನ್ನುವುದೇ ನಮ್ಮ ಉದ್ದೇಶ. ಫೋಸ್ ಕೊಡುವ ಉದ್ದೇಶದಿಂದ ಓಡಾಡಿಲ್ಲ. ಜನರ ಜೀವ ಉಳಿಸುವ ಉದ್ದೇಶದಿಂದ ಹೋರಾಡಬೇಕಾಯಿತು.
ಈ ಸಂದರ್ಭದಲ್ಲಿ ಸಾಜೀದ್ ಸಮೀರ್, ಅಸ್ಲಾಂ ಪಾಷಾ, ಮಾಡಗಿರಿ ನರಸಿಂಹಲು, ಅರುಣ್ ದೋತರಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.