ಕೊರೊನಾ ಸೋಂಕಿತರಿಗೆ ಹಟ್ಟಿ ಚಿನ್ನದಗಣಿ ೧೨೦ ಬೆಡ್ – ಆಸ್ಪತ್ರೆ ವ್ಯವಸ್ಥೆ

ರಾಯಚೂರು.ಮೇ.೧೯- ಜಿಲ್ಲೆಯ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ಸೌಲಭ್ಯ ನೀಡಲಾಗುತ್ತದೆಂದು ಗಣಿ ಸಚಿವರಾದ ಮುರುಗೇಶ ನಿರಾಣಿ ಅವರು ಭರವಸೆ ನೀಡಿದರು.
ಅವರಿಂದು ಹಟ್ಟಿ ಚಿನ್ನದಗಣಿಯ ೧೨೦ ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಿ, ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಹಾಗೂ ಜಿಲ್ಲೆಯ ಸಂಸದ, ಶಾಸಕರು ಶ್ರಮಿಸುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರಿಂದ ಕೊರೊನಾ ಸೋಂಕಿತರನ್ನು ಎ ಬಿ ಸಿ ಯಾಗಿ ವಿಂಗಡಿಸಬೇಕಾಗುತ್ತದೆ. ಸೋಂಕು ಲಕ್ಷಣಗಳು ಇದ್ದರೇ ಮನೆಯಲ್ಲಿ ಚಿಕಿತ್ಸೆ ನೀಡಿ, ಗಂಭೀರ ಪರಿಸ್ಥಿತಿಯಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು.
ಜಿಲ್ಲಾ ಆರೋಗ್ಯ ಅಧಿಕಾರಿಗಳು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಬೇಕು. ಆಕ್ಸಿಜನ್ ನಿರ್ವಹಣೆಯಲ್ಲಿ ವಿಶೇಷ ಗಮನ ಹರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಆಕ್ಸಿಜನ್ ಕಾರಣವಾಗದಂತೆ ಎಚ್ಚರ ವಹಿಸಬೇಕು. ಹಟ್ಟಿ ಚಿನ್ನದಗಣಿಯಿಂದ ೧೨೦ ಹಾಸಿಗೆಗಳ ಆಸ್ಪತ್ರೆ ಆರಂಭಿಸುವ ಮೂಲಕ ಇಲ್ಲಿಯ ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿದೆ. ಹಟ್ಟಿ ಚಿನ್ನದ ಗಣಿಯ ಅಗಲೀಕರಣ ಮತ್ತು ವಿಸ್ತರಣೆಗೆ ವಿಸ್ತೃತವಾದಂತಹ ಅಂದಾಜು ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತದೆ. ಶೀಘ್ರ ಇದನ್ನು ಸಿದ್ಧಪಡಿಸಿ, ಗ್ಲೋಬಲ್ ಟೆಂಡರ್ ಕರೆಯಲಾಗುತ್ತದೆ.
ಹಟ್ಟಿ ಚಿನ್ನದ ಗಣಿ ಪ್ರತಿ ವರ್ಷ ೭೦ ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತದೆ. ಈ ಹಿನ್ನೆಲೆಯಲ್ಲಿ ಸ್ವಯಂ ಉತ್ಪಾದನೆಗೆ ಗಂಭೀರ ಚಿಂತನೆ ನಡೆದಿದೆ. ಇದರಿಂದ ಆರ್ಥಿಕ ಹೊರೆ ಕಡಿಮೆಯಾಗುವುದರೊಂದಿಗೆ ಸಂಕಷ್ಟದ ಕಾಲದಲ್ಲೂ ಸುಲಭವಾಗಿ ವಿದ್ಯುತ್ ಪಡೆಯಲು ಕಾರಣವಾಗುತ್ತದೆಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಅಧ್ಯಕ್ಷ ಮಾನಪ್ಪ ವಜ್ಜಲ್, ಶಾಸಕರಾದ ಡಿ.ಎಸ್.ಹೂಲಗೇರಿ, ಕೆ.ಶಿವನಗೌಡ ನಾಯಕ, ತ್ರಿವಿಕ್ರಮ ಜೋಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.