ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ: ಸಚಿವ ಪ್ರಭು ಚವ್ಹಾಣ್ ಸೂಚನೆ

ಬೀದರ, ಏ.21: ಕೋವಿಡ್-19 ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು. ಈ ಕುರಿತಂತೆ ಯಾವುದೇ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆ ಸಂದರ್ಭದಲ್ಲಿ ಕೋವಿಡ್ ಸೋಂಕಿತರೊಬ್ಬರು ಸಂಪರ್ಕಕ್ಕೆ ಬಂದಿದ್ದು, ತಮ್ಮ ಗ್ರಾಮದಲ್ಲಿ ಮನೆಯ ಹತ್ತಿರ ಇಬ್ಬರು ಕೊರೊನಾದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಏಪ್ರಿಲ್ 18ರಿಂದ ಹೋಂ ಕ್ವಾರಂಟೈನ್‍ನಲ್ಲಿದ್ದೇನೆ. ಬಸವಕಲ್ಯಾಣ ಉಪ ಚುನಾವಣೆ ಹಾಗೂ ಬೀದರ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳ ಸಭೆ ಅಥವಾ ಅಧಿಕಾರಿಗಳ ಸಭೆಗಳನ್ನು ನಡೆಸಲು ಆಗಿಲ್ಲ. ಆದರೂ ಮನೆಯಲ್ಲಿದ್ದುಕೊಂಡೇ ಕೊರೊನಾ ಸ್ಥಿತಿಗತಿಯ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಬ್ರಿಮ್ಸ್ ನಿರ್ದೇಶಕರು, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದೇನೆ. ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 1,61,433 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 15,251 ಕೋವ್ಯಾಕ್ಸಿನ್ ಹಾಗೂ 1,46,182 ಕೋವಿಶೀಲ್ಡ್ ಪಡೆದಿದ್ದಾರೆ. ಪ್ರತಿ ದಿನ 3500 ಸ್ಯಾಂಪಲ್ ಟೆಸ್ಟ್ ಮಾಡಲು ಗುರಿ ನಿಗದಿಪಡಿಸಿದ್ದು, ಅದರಂತೆ ಟೆಸ್ಟ್ ನಡೆಯುತ್ತಿದೆ. 479 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2574 ಜನ ಹೋಂ ಐಸೋಲೇಷನ್‍ನಲ್ಲಿದ್ದಾರೆ. ಬೇಡಿಕೆಗೆ ಅನುಗುಣ ಆಕ್ಸಿಜನ್ ಸಂಗ್ರಹಿಸಿಕೊಂಡಿರಬೇಕು. ಶಿಫ್ಟ್ ಆಧಾರದಲ್ಲಿ ದಿನದ 24 ಗಂಟೆಯೂ ವೈದ್ಯರು ರೋಗಿಗಳೊಂದಿಗಿದ್ದು, ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬೀದರ ಜಿಲ್ಲೆಯಲ್ಲಿ ಬೆಡ್‍ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಬೆಡ್‍ಗಳ ವ್ಯವಸ್ಥೆ ಮಾಡಬೇಕು. ಅಗತ್ಯವಿರುವ ಎಲ್ಲಾ ಸೋಂಕಿತರಿಗೆ ಆಕ್ಸಿಜನ್ ಹಾಗೂ ರೆಮ್ಡಿಸಿವಿರ್ ಔಷಧ ಪೂರೈಸಬೇಕು ಎಂದು ಸೂಚಿಸಿದ್ದೇನೆ. ಕೊರೊನಾ ಸೋಂಕು ಕುರಿತಂತೆ ಅಪಪ್ರಚಾರ ಮಾಡಲಾಗುತ್ತಿದೆ. ಸಾರ್ವಜನಕರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡದಿರಿ. ರೋಗ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಜೀವ ಇದ್ದರೆ ಜೀವನ. ದಯವಿಟ್ಟು ಎಲ್ಲರೂ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ. ಸಭೆ ಸಮಾರಂಭಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ. ಮನೆಯಿಂದ ಹೊರಬರುವಾಗ ತಪ್ಪದೇ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ.
ಯಾವುದೇ ಸಮಸ್ಯೆಯಿದ್ದಲ್ಲಿ ಪ್ರಶಾಂತ ಪವಾರ-9980218156, ದಿಲೀಪ್ ಚವ್ಹಾಣ-9770701777, ಜೈಪಾಲ ರಾಠೋಡ-9901108283 ಅಥವಾ ಸಚಿವರ ಕಾರ್ಯಾಲಯ-084822-20400, 9731415152ಗೆ ಸಂಪರ್ಕಿಸಬಹುದು.