ಕೊರೊನಾ ಸೇನಾನಿಗಳ ಕರ್ತವ್ಯದಿಂದ ಸೋಂಕು ನಿಯಂತ್ರಣ

ಮಾಲೂರು.ನ೭:ಆರೋಗ್ಯ ಇಲಾಖೆಯ ವೈದ್ಯರು ಆಶಾಕಾರ್ಯಕರ್ತರು ಹಾಗೂ ಗ್ರಾ.ಪಂ. ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತಿಲ್ಲವೆಂದು ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ತಿಳಿಸಿದರು.
ಅವರು ಮಾಲೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರೋನಾ ವಾರಿಯರ್‍ಸ್‌ಗೆ ಆಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಆಶಾಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ,ಕೊರೋನಾ ಎಂಬ ಮಹಾಮಾರಿ ವೈರಸ್ ವಿಶ್ವದಾದ್ಯಂತ ವೇಗವಾಗಿ ಹರಡುವ ಮೂಲಕ ಮರಣ ಮೃದಂಗ ಭಾರಿಸುತ್ತಿದೆ. ನಮ್ಮ ದೇಶ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸೋಂಕನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಆರೋಗ್ಯ ಸಂರಕ್ಷಣಾತ್ಮಕ ಮಾರ್ಗಸೂಚಿಗಳನ್ನು ಅನುಷ್ಟಾನಗೊಳಿಸಿದೆ.
ಸೋಂಕಿಗೆ ವ್ಯಾಕ್ಸಿನ್ ಇದುವರೆಗೂ ಕಂಡು ಹಿಡಿಯಲಿಲ್ಲ, ಸೋಂಕು ಹರಡದಂತೆ ತಡೆಗಟ್ಟಲು ಆರೋಗ್ಯ ಇಲಾಖೆ, ಗ್ರಾ.ಪಂ.ಪುರಸಭೆಯ ಅಧಿಕಾರಿಗಳ ಸಹಕಾರ ನೀಡಬೇಕು. ಪ್ರತಿಯೊಬ್ಬ ನಾಗರೀಕರು ಮನೆಯಿಂದ ಹೊರಬಂದಾಗ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಪಾಲಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪತ್ರಕರ್ತರ ಸಂಘದವರು ನಮ್ಮ ಸೇವೆಯನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸಿರುವುದರಿಂದ ನಮ್ಮ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ವಿ.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊರೋನಾ ಸೋಂಕು ಇದೊಂದು ಮಹಾಮಾರಿಯಾಗಿ ಜನತೆಯ ಜೀವನವನ್ನು ಹಾಳು ಮಾಡಿದೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯು ಸಂಕಷ್ಟದಲ್ಲಿದೆ. ಸೋಂಕು ಹೆಚ್ಚಾಗಿ ಹರಡುತ್ತಿದೆ. ಅಷ್ಟೇ ಮಂದಿ ಗುಣಮುಖರಾಗುತ್ತಿದ್ದಾರೆ. ಮರಣದ ಸಂಖ್ಯೆ ಕಡಿಮೆ ಇದ್ದರು ಸೋಂಕಿನ ಬಗ್ಗೆ ನಿರ್ಲಕ್ಷ್ಯಬೇಡ ಸೋಂಕನ್ನು ತಡೆಗಟ್ಟಲು ಸರ್ಕಾರ ಆರೋಗ್ಯ ಇಲಾಖೆ ವತಿಯಿಂದ ಬಿಡುಗಡೆ ಮಾಡಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪತ್ರಕರ್ತರು ಸಹವಾರಿಯಾರ್‍ಸ್ ಆಗಿ ಸೋಂಕು ತಡೆಗಟ್ಟಿರುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪತ್ರಕರ್ತರನ್ನು ಸಹ ರಾಜ್ಯ ಸರ್ಕಾರ ವಾರಿಯರ್‍ಸ್ ಆಗಿ ಘೋಷಿಸುವಂತೆ ತಿಳಿಸಿದರು.
ಈ ವೇಳೆ ಶಿಕ್ಷಕ ಸಂಘದ ಸಹಕಾರ್ಯದರ್ಶಿ ಶಶಿಧರ ಮಾತನಾಡಿ ಪತ್ರಕರ್ತ ಸಂಘದ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತ ಟೇಕಲ್ ಲಕ್ಷ್ಮೀಶ್‌ರವರು ಕರೋನಾ ವಾರಿಯರ್‍ಸ್‌ರವರ ಸೇವೆ ಗುರುತಿಸಿ ಸಂಘಕ್ಕೆ ಮಾಹಿತಿ ನೀಡಿ ಅಭಿನಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದರು.ಕಾರ್ಯಕ್ರಮದಲ್ಲಿ ವೈದ್ಯ ಡಾ.ಪ್ರಕಾಶ್, ಪ್ರಯೋಗಾಲಯ ಕೋವಿಡ್ ಪರೀವಿಕ್ಷಕ ನಾಗೇಶ್, ಆರೋಗ್ಯ ಸಹಾಯಕಿ ಅಖಿಲ, ಆಶಾಕಾರ್ಯಕರ್ತೆ ಕಮಲಮ್ಮರವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಸಂಘದ ವತಿಯಿಂದ ಟೇಕಲ್ ಲಕ್ಷ್ಮೀಶನ್ನು ಅಭಿನಂದಿಸಲಾಯಿತು.
ಕಾರ್ಯನಿರತ ಪತ್ರಕರ್ತ ಸಂಘದ ಮಾಜಿ ಜಿಲ್ಲಾ ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ, ಉಪಾಧ್ಯಕ್ಷ ಎಸ್.ನಾರಾಯಣಸ್ವಾಮಿ, ಖಜಾಂಚಿ ಭರತ್‌ಭೂಷಣ್, ಸಹಕಾರ್ಯದರ್ಶಿ ಮಾರುತೇಶ್, ಸದಸ್ಯರಾದ ಟಿ.ಕೆ.ನಾಗರಾಜ್, ಮಾಸ್ತಿ ಮೂರ್ತಿ, ನಂಜುಂಡಪ್ಪ, ಮುಂತಾದವರು ಇದ್ದರು.