ಕೊರೊನಾ ಸಾವಿನ ರಣಕೇಕೆ ರಾಜ್ಯಕ್ಕೆ 2ನೇ ಸ್ಥಾನ

-ಮುಹಮ್ಮದ್

ಬೆಂಗಳೂರು, ಏ.೧೯-ರಾಷ್ಟ್ರವ್ಯಾಪಿ ಕೋವಿಡ್ ಎರಡನೇ ಅಲೆಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರ ಬೆನ್ನಲ್ಲೇ ಕೊರೋನಾ ರೋಗಿಗಳ ಸಾವಿನ ಪ್ರಮಾಣದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯವೂ ದ್ವಿತೀಯ ಸ್ಥಾನ ತಲುಪಿರುವುದು ಭಾರೀ ಆತಂಕ ಹೆಚ್ಚಿಸಿದೆ.
ಬರೀ ಹದಿನೈದು ದಿನಗಳ ಹಿಂದೆಯಷ್ಟೇ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದ ಕರ್ನಾಟಕವೂ, ಕ್ಷಣಮಾತ್ರದಲ್ಲಿ ಎರಡನೇ ಸ್ಥಾನ ತಲುಪಿದೆ. ಇನ್ನು, ಕೋವಿಡ್ ಸಾವಿನ ಸಂಖ್ಯೆಯಲ್ಲಿ ಎಂಟು ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ, ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿರುವುದು ಆರೋಗ್ಯ ತಜ್ಞರನ್ನೇ ಬಿಚ್ಚಿಬೀಳಿಸಿದೆ.
ಯಾವ ರಾಜ್ಯ: ದೇಶದೆಲ್ಲೆಡೆ ಕೋವಿಡ್ ನಿಂದ ಸಂಭವಿಸಿದ ಸಾವುಗಳ ಪ್ರಮಾಣದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದರೆ ಆನಂತರ ಕರ್ನಾಟಕವಿದೆ. ಮೂರನೇ ಸ್ಥಾನದಲ್ಲಿ ತಮಿಳುನಾಡು, ಬಳಿಕ ದೆಹಲಿ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಛತ್ತೀಸ್‌ಗಢ, ಕೇರಳ ಹಾಗೂ ಕೊನೆ ಸ್ಥಾನದಲ್ಲಿ ರಾಜಸ್ತಾನವಿದೆ.
ಎಷ್ಟು ಸಾವುಗಳು?: ಕೋವಿಡ್ ಸೋಂಕಿನಿಂದ ಮಹಾರಾಷ್ಟ್ರದಲ್ಲಿ ಬರೋಬ್ಬರಿ ೫೯,೯೭೦ ಮಂದಿ ಸಾವನ್ನಪ್ಪಿದರೆ, ಕರ್ನಾಟಕದಲ್ಲಿ ೧೩,೩೫೧ ಮಂದಿ ಅಸುನೀಗಿದ್ದಾರೆ. ತಮಿಳುನಾಡಿನಲ್ಲಿ ೧೩,೦೭೧, ದೆಹಲಿ ೧೧,೯೬೦, ಪಶ್ಚಿಮಬಂಗಾಲ ೧೦,೫೪೦, ಉತ್ತರ ಪ್ರದೇಶ ೯,೮೩೦, ಆಂಧ್ರಪ್ರದೇಶ ೭,೪೧೦, ಛತ್ತೀಸ್‌ಗಢ ೫,೭೩೮, ಕೇರಳ ೪,೯೩೦, ರಾಜಸ್ತಾನದಲ್ಲಿ ೩,೧೫೧ ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಸಾವಿನ ಸಂಖ್ಯೆಯಲ್ಲಿಯೇ ಮಾತ್ರವಲ್ಲದೆ, ಪಾಸಿಟಿವ್ ಪ್ರಕರಣಗಳಲ್ಲೂ ಕರ್ನಾಟಕವೂ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ಕೇರಳ ಬಳಿಕ ಕರ್ನಾಟಕವೂ ದೇಶದ ಕೊರೋನಾ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ ಒಟ್ಟು ೧೧ ಲಕ್ಷದ ೪೧ ಸಾವಿರ ೯೯೮ ಪ್ರಕರಣಗಳು ಪತ್ತೆಯಾಗಿವೆ.
ಮತ್ತೊಂದೆಡೆ ಚೇತರಿಕೆ ಪ್ರಮಾಣದಲ್ಲಿ ತುಸು ಮುಂದಿರುವ ಕರ್ನಾಟಕ ರಾಜ್ಯವೂ ಮೂರನೇ ಸ್ಥಾನದಲ್ಲಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರದಲ್ಲಿ ೩೦,೬೧,೧೭೪ ಮಂದಿ ಚೇತರಿಕೆ ಆಗಿದ್ದರೆ, ಕೇರಳದಲ್ಲಿ ೧೧,೪೦,೪೮೬ ಜನರು ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ. ಅದೇ ರೀತಿ, ಕರ್ನಾಟಕದಲ್ಲೂ ಚೇತನ ಪ್ರಮಾಣ ಹೆಚ್ಚಿದ್ದು, ಒಟ್ಟು ೧೦,೧೪,೧೫೨ ಜನರು ಚೇತರಿಸಿಕೊಂಡಿದ್ದಾರೆ.
ಬೆಂಗಳೂರು ಹಾಟ್‌ಸ್ಪಾಟ್: ಕೋವಿಡ್ ವಿಚಾರದಲ್ಲಿ ದೇಶ ಮಹಾನಗರಗಳ ಪೈಕಿ ಬೆಂಗಳೂರು ಸಹ ಹಾಟ್‌ಸ್ಪಾಟ್ ಆಗಿದ್ದು, ಪಾಸಿಟಿವ್, ಚೇತರಿಕೆ ಹಾಗೂ ಸಾವಿನ ಪ್ರಮಾಣದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸರಿ ಸುಮಾರು ೮,೨೭,೯೯೮ರಷ್ಟು ಮಂದಿಗೆ ಕೋವಿಡ್ ಸೋಂಕಿ ದೃಢಪಟ್ಟರೆ, ೭,೪೬,೨೩೯ ಜನರು ಚೇತರಿಕೆ ಕಂಡಿದ್ದಾರೆ.ಇನ್ನು, ೧೧,೯೬೦ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಅದೇ ರೀತಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಸರಿ ಸುಮಾರು ೫,೪೬,೬೩೫ ಜನರು ಕೋವಿಡ್‌ಗೆ ಗುರಿಯಾದರೆ, ೪,೪೩,೬೧೪ ಜನರು ಚೇತರಿಸಿಕೊಂಡಿದ್ದಾರೆ. ಆದರೆ, ಬರೋಬ್ಬರಿ ೫,೧೨೪ ಜನರು ಸಾವನ್ನಪ್ಪಿದ್ದಾರೆ.
ಪಾಸಿಟಿವ್, ಚೇತರಿಕೆ ಹಾಗೂ ಸಾವಿನ ಪ್ರಮಾಣದಲ್ಲಿ ಮೊದಲನೇ ಸ್ಥಾನದಲ್ಲಿ ನವದೆಹಲಿ, ಎರಡನೇ ಸ್ಥಾನದಲ್ಲಿ ಬೆಂಗಳೂರು, ಮೂರನೇ ಸ್ಥಾನಕ್ಕೆ ಮುಂಬೈ, ನಾಲ್ಕನೇದಾಗಿ ಚೆನ್ನೈ ಹಾಗೂ ಐದನೇ ಸ್ಥಾನದಲ್ಲಿ ಕಲ್ಕತ್ತಾ ಇದೆ ಎಂದು ಆರೋಗ್ಯ ತಜ್ಞರು ದೃಢಪಡಿಸಿದ್ದಾರೆ.ಬಾಕ್ಸ್…
ಒಂದೇ ದಿನದಲ್ಲಿ ೧೬೦೦ ಮಂದಿ ಸಾವು..!
ದೇಶದಲ್ಲಿ ಕೇವಲ ಎರಡು ವಾರಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದ್ವಿಗುಣಗೊಂಡಿದ್ದು, ಕಳೆದ ೨೪ ಗಂಟೆಗಳಲ್ಲಿ ವಿವಿಧ ರಾಜ್ಯಗಳು ಒಳಗೊಂಡತೆ ಒಟ್ಟು ೧,೬೦೦ ಜನರು ಸಾವನ್ನಪ್ಪಿದ್ದಾರೆ. ಇನ್ನು, ಪಾಸಿಟಿವ್ ಬಂದವರ ಸಂಖ್ಯೆಯೂ ಒಂದೇ ದಿನಕ್ಕೆ ೨.೭೫ ಲಕ್ಷ ತಲುಪಿರುವುದು ಭೀತಿ ಹುಟ್ಟಿಸಿದೆ.