ಕೊರೊನಾ: ಸಾರ್ವಜನಿಕರು ಕಟ್ಟುನಿಟ್ಟಿನ ಮಾರ್ಗಸೂಚಿ ಅನುಸರಿಸಿ

ನವಲಗುಂದ, ಮೇ1: ಕೊರೊನಾ ಎರಡನೇ ಅಲೆಯ ಸೋಂಕು ಹಂತ ಹಂತವಾಗಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿದ್ದು ಸಾರ್ವಜನಿಕರು ಕಟ್ಟುನಿಟ್ಟಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಎಚ್ಚರ ತಪ್ಪಿದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ತಹಶೀಲ್ದಾರ್ ಪ್ರಕಾಶ ಹೊಳೆಯಪ್ಪಗೋಳ ಎಚ್ಚರಿಕೆ ನೀಡಿದರು.
ಶುಕ್ರವಾರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕೈಗೊಂಡಿರುವ ಮುನ್ನಚ್ಚರಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ತಾಲ್ಲೂಕಿನಲ್ಲಿರುವ 16 ಗ್ರಾಮ ಪಂಚಾಯ್ತಿಗಳಲ್ಲಿ 37 ಗ್ರಾಮಗಳು ಬರುತ್ತವೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೇತ್ರತ್ವದಲ್ಲಿ ಪ್ರತಿ ಗ್ರಾಮಗಳಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಪಂಚಾಯ್ತಿ ಮಟ್ಟದಲ್ಲಿ ಆಯಾ ಗ್ರಾಮದ ಹಿರಿಯರು, ಪಂಚಾಯ್ತಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ. ರೆಡ್ ಝೋನ್‍ದಿಂದ ಬರುವ ಜನರನ್ನು ಗುರುತಿಸುವುದು, ಅವರ ಟ್ರ್ಯಾವೆಲ್ ಹಿಸ್ಟರಿ ಪಡೆದುಕೊಳ್ಳುವುದು, ಪ್ರತಿಯೊಬ್ಬರು ಸ್ವ್ಯಾಬ್ ಟೆಸ್ಟಿಂಗ್ ಮಾಡುವುದು, ಪಾಸಿಟಿವ್ ಬಂದವರ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟಾಕ್ಟ ಬಂದವರನ್ನು ಹೊಮ್ ಕ್ವಾರಂಟೆನ್ ಮಾಡಲು ತಿಳಿಸಲಾಗಿದೆ.
ಕಡ್ಡಾಯವಾಗಿ ಎಲ್ಲರು ಲಸಿಕೆ ತೆಗೆದುಕೊಳ್ಳುವಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುವಂತೆ, ಕಡ್ಡಾಯವಾಗಿ ಟೆಸ್ಟಿಂಗ್ ಮಾಡಿಸುವಂÀತೆ ಸೂಚನೆ ನೀಡಲಾಗಿದ್ದು, ಅಷ್ಟೇ ಅಲ್ಲದೇ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಅಥವಾ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ 50 ಹಾಗೂ ಅಂತ್ಯ ಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪಟ್ಟಣದಲ್ಲಿ ಮುಖ್ಯಾಧಿಕಾರಿಗಳನ್ನು ಸ್ಪೇಷಲ್ ಆಫಿಸರ್ ಆಗಿ ನೇಮಕ ಮಾಡಿದ್ದು ಆಯಾ ವಾರ್ಡಿನ ಸದಸ್ಯರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಲು ಜವಾಬ್ದಾರಿ ವಹಿಸಲಾಗಿದೆ. ಕೊವಿಡ್ ಕಾರಣದಿಂದ ಮೃತಪಟ್ಟರೆ ಮುಖ್ಯಾಧಿಕಾರಿಗಳ ನೇತ್ರತ್ವದಲ್ಲಿಯೇ ಕೊವಿಡ್ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ.
ಏಪ್ರಿಲ್ 30 ರ ವರೆಗೆ 161 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 99 ಜನರನ್ನು ಹೋಮ್ ಐಸೊಲೇಷನ್‍ಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 25 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 37 ಜನರು ಗುಣಮುಖರಾಗಿದ್ದು ಡಿಸ್ಚಾರ್ಜ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ನವಲಗುಂದ ಸರ್ಕಾರಿ ಆಸ್ಪತೆಯಲ್ಲಿ 50 ಆಕ್ಸಿಜನ್, 4 ವೆಂಟಿಲೇಟರ್ ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಅಷ್ಟೇ ಅಲ್ಲದೇ ಮುರಾರ್ಜಿ ವಸತಿ ಶಾಲೆಯನ್ನು ಕೊವಿಡ್ ಕೇರ್ ಸೆಂಟರ್ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ತಹಶೀಲ್ದಾರ್ ಕಚೇರಿಯಲ್ಲಿ ಸಹಾಯವಾಣಿ 08380 229240 ತೆರೆಯಲಾಗಿದ್ದು ಅಗತ್ಯಬಿದ್ದಲ್ಲಿ ಸಂಪರ್ಕಿಸಬಹುದಾಗಿದೆ. ಯಾವುದೇ ಭಯ ಪಡದೇ ಲಸಿಕೆ ಪಡೆದುಕೊಳ್ಳುವಂತೆ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮನವಿ ಮಾಡಿದರು.