ಕೊರೊನಾ ಸಕ್ರಿಯ ಪ್ರಕರಣಗಳ ಇಳಿಕೆ

ನವದೆಹಲಿ, ನ.೧೧- ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ಇಳಿಮುಖವಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೫ ಲಕ್ಷಕ್ಕಿಂತ ಕಡಿಮೆಯಾಗಿರುವುದು ಸ್ವಲ್ಪ ಮಟ್ಟಿಗೆ ನಿರಾಳತೆ ತಂದಿದೆ. ಕೊರೊನಾ ಸೋಂಕಿನ ಅಬ್ಬರ ಹೆಚ್ಚಾದ ೧೦೬
ದಿನಗಳ ನಂತರ ಸೋಂಕಿತರ ಸಂಖ್ಯೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ದೇಶದಲ್ಲಿ ಈಗ ೪,೯೪,೬೫೭ ಸಕ್ರಿಯ ಪ್ರಕರಣಗಳಿದ್ದು, ಬೇರೆ ದೇಶಗಳಲ್ಲಿ ಸಕ್ರಿಯ ಪ್ರಕರಣಗಳು ಏರುತ್ತಿರುವಾಗ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಇಳಿಕೆ ಗಣನೀಯ ಸಾಧನೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಣ್ಣಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ೮೬ ಲಕ್ಷ ದಾಟಿದ್ದರೂ ಸಕ್ರಿಯ ಪ್ರಕರಣಗಳು ೫ ಲಕ್ಷಕ್ಕಿಂತ ಕಡಿಮೆಯಾಗಿರುವುದು ಸೋಂಕು ಹೆಚ್ಚಾಗುವ ಆತಂಕವನ್ನು ಕಡಿಮೆಮಾಡಿದೆ.
ಜಗತ್ತಿನಲ್ಲಿ ಪ್ರತಿ ಸರಾಸರಿ ಪ್ರತಿ ಲಕ್ಷ ಜನರಿಗೆ ೬,೪೩೯ ಸೋಂಕು ಪ್ರಕರಣಗಳು ಇದ್ದರೆ ಭಾರತದಲ್ಲಿ ೬,೨೨೫ ಪ್ರಕರಣಗಳು ಇದ್ದು ಬೇರೆ ದೇಶಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಕಡಿಮೆಯಾಗಿದೆ. ಸಕ್ರಿಯ ಪ್ರಕರಣಗಳ ಇಳಿಕೆ ಜತೆಗೆ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಸಹ ಹೆಚ್ಚಾಗಿದ್ದು, ದೇಶದಲ್ಲಿ ೮೦ ಲಕ್ಷಕ್ಕೂ ಅಧಿಕ ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ ನಿನ್ನೆ ೪೪,೨೮೧ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ ೮೬೩೬೦೧೧ಕ್ಕೆ ಏರಿಕೆಯಾಗಿದೆ. ಹಾಗೆಯೇ ಸೋಂಕಿನಿಂದ ಇದುವರೆಗೂ ೮೦,೧೩,೭೮೩ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ೪,೯೪,೬೫೭ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ದೇಶದಲ್ಲಿ ಹಲವು ದಿನಗಳಿಂದ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆಸಿಕೊಂಡು ಸೋಂಕನ್ನು ನಿಯಂತ್ರಣಕ್ಕೆ ತರಲು ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ದೇಶದಲ್ಲಿ ನಿನ್ನೆ ಮಂಗಳವಾರ ೨ನೇ ಅತಿ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ೧೧.೯೬ ಮಂದಿಗೆ ನಿನ್ನೆ ಒಂದೇ ದಿನ ಕೊರೊನಾ ತಪಾಸಣೆ ನಡೆದಿದ್ದು, ಶೇ. ೪೯ ರ್‍ಯಾಪಿಡ್ ಆಂಟಿಜನ್ ಮತ್ತು ಶೇ. ೪೬ರಷ್ಟು ಆರ್‌ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು.
ಕಳೆದ ೨ ವಾರಗಳಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಪರೀಕ್ಷೆಗಳು ನಡೆಯುತ್ತಿವೆ. ಪಾಸಿಟಿವ್ ಪ್ರಕರಣಗಳ ದೃಢಪಡುವಿಕೆ ಶೇ. ೭.೧೮ಕ್ಕೆ ಇಳಿದಿದೆ ಎಂದು ಅವರು ಹೇಳಿದ್ದಾರೆ.
೪೪ ಸಾವಿರ ಹೊಸ ಸೋಂಕು:
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪೪,೨೮೧ ಸೋಂಕಿನ ಪ್ರಕರಣಗಳು ದಾಖಲಾಗಿದ್ದು ೫೧೨ ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸುತ್ತಿನ ಪ್ರಕರಣಗಳ ಸಂಖ್ಯೆ ಶೇಕಡಾ ೫.೭೩ ರಷ್ಟಿದೆ.ಸಾವಿನ ಪ್ರಮಾಣ ಶೇ.೧.೪೮ ರಷ್ಟು ಎಂದು ಕೇಂದ್ರ ಸರಕಾರ ತಿಳಿಸಿದೆ.
ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದುವರೆಗೂ ದೇಶದಲ್ಲಿ ಚೇತರಿಸಿಕೊಂಡ ಅವರ ಪ್ರಮಾಣ ಶೇಕಡ ೯೨.೭೯ಕ್ಕೆ ಏರಿಕೆಯಾಗಿದೆ.
ಕೋವಾಕ್ಸಿನ್ ಮೂರನೇ ಹಂತದ ಪ್ರಯೋಗ:
ಈ ನಡುವೆ ದೇಶದಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ದೇಶದಲ್ಲಿ ಆರಂಭವಾಗಿದ್ದು ಅತಿ ಶೀಘ್ರದಲ್ಲೇ ಫಲಿತಾಂಶ ಬರುವ ಸಾಧ್ಯತೆಗಳಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
ಜವಾಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ವಯಂಸೇವಕರ ಮೇಲೆ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಪ್ರಾಧ್ಯಾಪಕ ತಾರಿಕ್ ಮನುಷ್ಯರು ಹೇಳಿದ್ದಾರೆ.
ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಹಲವು ಮಂದಿ ಪಾಲ್ಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ