ಕೊರೊನಾ ಸಂರ್ಪಕದ ಬಗ್ಗೆ `ರಾಂಗ್ ನಂಬರ್ ಪತ್ತೆಗಾಗಿ ಅಧಿಕಾರಿ ವರ್ಗದ ಹರಸಾಹಸ..!

ಪುತ್ತೂರು, ಮೇ ೫- ಕೊರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಮೊಬೈಲ್ ನಂಬರ್ ತಪ್ಪಾಗಿ ನೀಡುತ್ತಿದ್ದಾರೆ. ಹಾಗಾಗಿ ಇವರನ್ನು ಸಂಪರ್ಕಿಸಲು ಹರಸಾಹಸ ಮಾಡಿದರೂ ಸಾಧ್ಯವಾಗುತ್ತಿಲ್ಲ. ಇದು ಸೋಂಕಿತರು ಉದ್ದೇಶಪೂರ್ವಕ ಮಾಡುತ್ತಿರುವ ತಪ್ಪೋ ಅಥವಾ ನೊಂದಾವಣೆ ಮಾಡುವಾಗ ನಡೆಯುತ್ತಿರುವ ಎಡವಟ್ಟೋ ಅನ್ನುವ ಕುರಿತು ಪುತ್ತೂರು ನಗರಸಭೆಯಲ್ಲಿ ನಡೆದ ಕೊರೊನಾ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ದೀರ್ಘ ಕಾಲದ ಚರ್ಚೆಗೆ ಕಾರಣವಾಯಿತು.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮೊಬೈಲ್ ನಂಬರೇ ಇಲ್ಲದ ನಂಬರ್ ಗಳನ್ನು ನಮೂದಿಸಲಾಗುತ್ತಿದೆ. ಇದರಿಂದ ಸೋಂಕಿತರ ಸಂಪರ್ಕ ಹೊಂದಿದವರನ್ನು ಹುಡುಕಾಡಲು ಕಷ್ಟ ಎಂದು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಪ್ರಸ್ತಾಪಿಸಿದರು.  ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಮಾತನಾಡಿ ಪೋನ್ ನಂಬರ್ ತಪ್ಪಲು ಸಾಧ್ಯವಿಲ್ಲ. ಆಪ್‌ನಲ್ಲಿ ಪೀಡ್ ಮಾಡುವವರಿಂದ ತಪ್ಪಾಗಿದೆ. ಇಲ್ಲಿ ಆರೋಗ್ಯ ಇಲಾಖೆ ತಪ್ಪಿಲ್ಲ. ಒಂದು ವೇಳೆ ಲ್ಯಾಬ್‌ಟೆಕ್ನೀಷಿಯನ್ನು ತಪ್ಪು ಮಾಡಿದರೆ ಅದು ದೊಡ್ಡ ತಪ್ಪು ಆಗುತ್ತದೆ ಎಂದರು.  ಈ ನಡುವೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಮಾತನಾಡಿ ಅಂಗನವಾಡಿ, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ, ಅಧಿಕಾರಿ ವರ್ಗದವರು ಶಿಕ್ಷಕರೊಂದಿಗೆ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ತೂರು ತಾಲೂಕಿನ ಪ್ರಗತಿ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಆದರೆ ಇವತ್ತು ನಾವು ಜಿಲ್ಲೆಯಲ್ಲಿ ನಾವು ಕೋವಿಡ್ ನಿಯಂತ್ರಣದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ಆದರೆ ಡಾಟಾ ಎಂಟ್ರಿ ತೊಂದರೆ ಕಂಡಿರುವುದು ಬೆಳಕಿಗೆ ಬಂದಿದೆ. ಆದರೆ ನಮ್ಮ ಶಿಕ್ಷಕರಿಂದ ಲೋಪದೋಷ ಆಗಿದೆ ಎಂದು ಖಚಿತ ಪಡಿಸಿಕೊಂಡು ಆರೋಪ ಮಾಡುವುದು ಉತ್ತಮ ಎಂದರು. ತಹಶೀಲ್ದಾರ್ ರಮೇಶ್ ಬಾಬು ಅವರು ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.

ಸೋಂಕಿತರ ಸಂಪರ್ಕದವರ ಮೊಬೈಲ್ ಸ್ಥಗಿತ

ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದಾರೆ. ಕೆಲವು ಕಡೆ ೧೫ ಮಂದಿಗೆ ಒಂದೆ ಮೊಬೈಲ್ ನಂಬರ್ ಕೊಡುತ್ತಾರೆ. ಅವರನ್ನು ಹೇಗೆ ಕಂಡುಹುಡುಕುವುದು ಎಂದು ನಗರಸಭಾ ಅಧಿಕಾರಿಗಳು ಅಳಲು ತೋಡಿಕೊಂಡರು.

ಗುರಿ ಸಾಧನೆಗೆ ಎಡವಟ್ಟು

ಜಿಲ್ಲಾಡಳಿತದಿಂದ ಪ್ರತಿಯೊಬ್ಬ ಕೋವಿಡ್ ಸೋಂಕಿತನಿಗೆ ೩೦ ಮಂದಿಯ ಕೋವಿಡ್ ಪ್ರಾಥಮಿಕ ಸಂಪರ್ಕಿತರ ಪಟ್ಟಿ ಕೋಡಬೇಕು. ಒಂದೆ ಮನೆಯಲ್ಲಿ ಕೇವಲ ೫ ಮಂದಿ ಇದ್ದರೆ ಅಲ್ಲಿ ಉಳಿದ ೨೫ ಮಂದಿಯ ಸಂಪರ್ಕವನ್ನು ಕೊಡುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ಹಾಗಾಗಿ ಸೋಂಕಿತರ ಮನೆಯ ಅಕ್ಕಪಕ್ಕದ ಮೊಬೈಲ್ ನಂಬರ್ ಕೊಡುವಲ್ಲಿ ಎಡವಟ್ಟಾಗಿರಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. 

ಪ್ರಥಮ ಸಂಪರ್ಕಿತರು ಮತ್ತು ಸೆಕೆಂಡರಿ ಸಂಪರ್ಕಿತರಿಗೆ ಸಿಮ್‌ಟಮ್ಸ್ ಇದ್ದರೆ ಮಾತ್ರ ಪರೀಕ್ಷೆಗೊಳಪಡಿಸಲಾಗುವುದು. ಕಡ್ಡಾಯವಾಗಿ ಪರೀಕ್ಷೆ ಮಾಡಬೇಕೆಂದು ಹಟ ಹಿಡಿಯಬೇಡಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ,  ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರೀನಾಥ್ ರೈ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಉಪಸ್ಥಿತರಿದ್ದರು.