ಕೊರೊನಾ ಸಂದಿಗ್ಧ ಪರಿಸ್ಥಿತಿ ಸಮರ್ಥವಾಗಿ ಎದುರಿಸೋಣ

ದಾವಣಗೆರೆ,ಜೂ.6: ಎಲ್ಲವನ್ನೂ ಸರ್ಕಾರದಿಂದಲೇ ಮಾಡಲಾಗುವುದಿಲ್ಲ ಜಿಲ್ಲಾಡಳಿತದೊಮದಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಕೈಜೋಡಿಸಿ ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದರು.ನಗರದ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯು ಹಳೇ ವಿದ್ಯಾರ್ಥಿಗಳ ಸಹಾಯಾರ್ಥದೊಂದಿಗೆ ಕೊರೊನಾ ಸೋಂಕಿತರಿಗೆ ಉಚಿತವಾಗಿ ನೀಡಲು ಆರಂಭಿಸಿರುವ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿದ್ದಗಂಗಾ ವಿದ್ಯಾಸಂಸ್ಥೆ ಮಾಡುತ್ತಿರುವ ಸೇವೆ ದಾವಣಗೆರೆ ಇತಿಹಾಸದಲ್ಲಿ ಹಚ್ಚಳಿಯದೆ ಉಳಿಯಲಿದೆ. ನಾನು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ ಬಂದಿದ್ದೇನೆ. ಆದರೆ, ದಾವಣಗೆರೆಯಲ್ಲಿರುವಷ್ಟು ಹೃದಯ ವೈಶಾಲ್ಯತೆ ಇರುವ ಜನ ಬೇರೆ ಎಲ್ಲೂ ಇಲ್ಲ ಎಂದು ಶ್ಲಾಘಿಸಿದರು.
ಕೊರೊನಾ ಸೋಂಕಿತರಿಗೆ ವೈದ್ಯರು ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮನೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಪಡೆಯುವಂತೆ ಶಿಫಾರಸು ಮಾಡುತ್ತಿದ್ದಾರೆ. ಆದರೆ, ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಈ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಅವಶ್ಯಕತೆ ಇದೆ. ಆದರೆ, ಇವುಗಳನ್ನು ಎಲ್ಲರೂ ಖರೀದಿಸಲಾಗುವುದಿಲ್ಲ. ಉಳ್ಳವರು ಹೇಗೋ ಪಾರಾಗುತ್ತಾರೆ. ಆದರೆ, ಬಡವರಿಗೆ ದಾನಿಗಳು ನೀಡುವ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅವಶ್ಯವಾಗಿದೆ ಎಂದರು.
ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿ ಬಹುತೇಕ ಜನರು ಸಾಮಾಜಿಕ ಜವಾಬ್ದಾರಿ ಅರಿತು ಕೊರೊನಾದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಸೇವಾ ಕಾರ್ಯ ಮಾಡುತ್ತಿದ್ದಾರೆ. ಸಿದ್ಧಗಂಗಾ ಶಾಲೆಯಿಂದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಉಚಿತ ಸೇವೆ ಆರಂಭಿಸಿರುವುದು ಮಾನವೀಯ ಕಾರ್ಯವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಯಲಿ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಡಾ.ಡಿ.ಎಸ್.ಜಯಂತ್ ಮಾತನಾಡಿ, ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿ 5 ಲಕ್ಷ ರೂ. ವೆಚ್ಚದಲ್ಲಿ 10 ಆಕ್ಸಿಜನ್ ಕಾನ್ಸನ್‌ಟ್ರೇಟರ್ ನೀಡಿದ್ದು, ಇವುಗಳನ್ನು ವೈದ್ಯರು ಶಿಫಾರಸು ಮಾಡುವ ರೋಗಿಗಳಿಗೆ 15ರಿಂದ 20 ದಿನಗಳ ವರೆಗೆ ನೀಡಿ, ಮತ್ತೆ ಅವರು ಮರಳಿಸಿದ ಬಳಿಕ ಇನ್ನೂ ಬೇರೆಯವರಿಗೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಜಸ್ಟಿನ್ ಡಿಸೋಜಾ, ಶಿವಣ್ಣ, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.