ಕೊರೊನಾ ಸಂಕಷ್ಟ ನಿವಾರಣೆಗೆ 500 ಕೋಟಿ ರೂ. ಖರ್ಚಿಗೆ ಒಪ್ಪಿಗೆ

ಬೆಂಗಳೂರು, ಜು. ೯- ಕೊರೊನಾ ಸಂಕಷ್ಟದಿಂದ ತೊಂದರೆಗೊಳಗಾಗಿರುವ ಸಮುದಾಯಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಅನುಕೂಲವಾಗುವಂತೆ ಸರ್ಕಾರದ ಸಾದಿಲ್‌ವಾರು ನಿಧಿಯಿಂದ ಒಂದು ಬಾರಿ 500 ಕೋಟಿ ರೂ.ಗಳನ್ನು ಖರ್ಚು ಮಾಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೊದಲು ಸಾದಿಲ್‌ವಾರು ನಿಧಿಯಿಂದ 80 ಕೋಟಿ ರೂ.ಗಳನ್ನು ಮಾತ್ರ ವೆಚ್ಚ ಮಾಡುವ ಮಿತಿ ಇದ್ದು, ಈ ಮಿತಿಯನ್ನು ಏರಿಸಲು ಶಾಸನ ರಚನೆ ಅಗತ್ಯ ಇರುವುದರಿಂದ ಸುಗ್ರೀವಾಜ್ಞೆ ಮೂಲಕ ಈ ಸಾದಿಲ್‌ವಾರು ನಿಧಿಯ ವೆಚ್ಚವನ್ನು ಒಂದು ಬಾರಿಗೆ 500 ಕೋಟಿ ರೂ.ಗಳಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆಯ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ತೊಂದರೆಗೊಳಗಾಗುವ ಸವಿತಾ, ಮಡಿವಾಳ, ಆಟೋ, ಟ್ಯಾಕ್ಸಿ, ಹೂಬೆಳೆಗಾರರು ಸೇರಿದಂತೆ ಹಲವರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್‌ನ್ನು ಘೋಷಿಸಿದೆ. ಇವರಿಗೆ ತಕ್ಷಣ ಹಣ ನೀಡಬೇಕಾಗಿರುವುದರಿಂದ ಸಾದಿಲ್‌ವಾರು ನಿಧಿಯ ವೆಚ್ಚ ಮಿತಿಯನ್ನು 80 ಕೋಟಿಯಿಂದ ಒಂದು ಬಾರಿಗೆ 500 ಕೋಟಿಗೆ ಏರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.
ಈಗ ವಿಧಾನಸಭಾ ಅಧಿವೇಶನ ಇಲ್ಲದೇ ಇರುವುದರಿಂದ ಈ ವೆಚ್ಚ ಮಿತಿಯನ್ನು ಏರಿಸಲು ಶಾಸನ ರೂಪಿಸಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಈ ಸಾದಿಲ್‌ವಾರು ನಿಧಿಯ ವೆಚ್ಚ ಮಿತಿಯನ್ನು 500 ಕೋಟಿಗೆ ಏರಿಸುವುದರಿಂದ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಸಮುದಾಯಗಳಿಗೆ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.