ಕೊರೊನಾ ಸಂಕಷ್ಟವನ್ನು ಧೈರ್ಯದಿಂದ ಎದುರಿಸಿ : ಶ್ರೀ ರಂಭಾಪುರಿ

ಹೊನ್ನೂರು.ಜೂ. 6: ಕೊರೊನಾ ಸೋಂಕಿನಿಂದಾಗಿ ಇಡೀ ಜಗತ್ತಿನ ಜನತೆ ತೊಂದರೆಗೀಡಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಎಲ್ಲಿ ನೋಡಿದಲ್ಲಿ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿ ಈ ಪ್ರಸಂಗವನ್ನು ಧೈರ್ಯದಿಂದ ಎದುರಿಸುವ ಮೂಲಕ ಅಮೂಲ್ಯ ಜೀವವನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ಶ್ರೀ ರಂಭಾಪುರಿ ಪೀಠದಲ್ಲಿ ಬಾಳೆಹೊನ್ನೂರಿನ ಸುಮಾರು 131 ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಆಶೀರ್ವಚನ ನೀಡುತ್ತಿದ್ದರು. ಬಾಳೆಹೊನ್ನೂರಿನ ಆಟೋ ಚಾಲಕರು ಶ್ರೀ ಪೀಠಕ್ಕೆ ಬರುವ ಯಾತ್ರಿಕರೊಂದಿಗೆ ಸೌಹಾರ್ದ ಸಾಮರಸ್ಯತೆಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಿ ಆಹಾರ ಕಿಟ್‌ಗಳನ್ನು ಶ್ರೀ ಪೀಠದಿಂದ ಆಶೀರ್ವಾದ ರೂಪದಲ್ಲಿ ನೀಡಲಾಗಿದೆ. ಸರ್ಕಾರಗಳು ಸಾರ್ವಜನಿಕರು ಎಷ್ಟೇ ಸಹಾಯ ಮಾಡಿದರೂ ಆ ವ್ಯಕ್ತಿಯ ನಿತ್ಯದ ದುಡಿಮೆಗೆ ಸಮನಾಗಲಾರದು. ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಸಮಸ್ಯೆಯನ್ನು ಎದುರಿಸಬೇಕು. ಆದಷ್ಟು ಬೇಗನೇ ಈಗ ಬಂದಿರುವ ಸಂಕಷ್ಟ ದೂರವಾಗಲಿ. ಜನತೆ ಎಂದಿನಂತೆ ತಮ್ಮ ದುಡಿಮೆಯಲ್ಲಿ ತೊಡಗಿಕೊಂಡು ಬಾಳುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಅಟೋ ಚಾಲಕ ಸಂಘದ ಅಧ್ಯಕ್ಷ ಸಂದೇಶ ಸೇರಿದಂತೆ ಹಲವಾರು ಪದಾಧಿಕಾರಿಗಳು ಶ್ರೀ ಪೀಠದ ಸಿಬ್ಬಂದಿಯವರಾದ ಚಂದ್ರಶೇಖರ, ರೇಣುಕ, ರವಿ, ವಿಶ್ವನಾಥ ಹಿರೇಮಠ, ಕುಮಾರ ಹಿರೇಮಠ, ಕೊಟ್ರಯ್ಯ ಮುಂತಾದವರು ಉಪಸ್ಥಿತರಿದ್ದರು.