ಕೊರೊನಾ ಸಂಕಷ್ಟದಲ್ಲಿ ವೈದ್ಯರು-ಪತ್ರಕರ್ತರ ಸೇವೆ ಅನನ್ಯ

ಮಧುಗಿರಿ, ಜು. ೨೯- ಪ್ರತಿ ವರ್ಷವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಪ್ರೋತ್ಸಾಹಿಸುವುದು ನಮ್ಮ ಉದ್ದೇಶ ಎಂದು ರೋಟರಿ ಅಧ್ಯಕ್ಷ ಎಂ.ಇ. ಕರಿಯಣ್ಣ ಹೇಳಿದರು.
ಪಟ್ಟಣದ ರಾಘವೇಂದ್ರ ಕಾಲೋನಿಯಲ್ಲಿರುವ ರೋಟರಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಕೆಲ ಸಮಾರಂಭಗಳನ್ನು ಆಯೋಜಿಸಲು ಆಗಿರಲಿಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ವೈದ್ಯರ ಹಾಗೂ ಪತ್ರಕರ್ತರ ಸೇವೆ ಅನನ್ಯವಾಗಿದ್ದು ಅವರುಗಳಿಂದಾಗಿ ನಾವೆಲ್ಲರೂ ಕ್ಷೇಮವಾಗಿದ್ದೇವೆ. ನಮ್ಮ ೩೧೯೦ ಘಟಕದ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವೈದ್ಯ ಡಾ. ಆನಂದ್ ಮಾತನಾಡಿ, ವೈದ್ಯರು ಹೆಚ್ಚಾಗಿ ಗ್ರಾಮೀಣಾ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಆ ಜನರ ಸೇವೆ ಮಾಡುವುದು ನಮ್ಮ ಪುಣ್ಯ. ಜನರ ಪ್ರೀತಿ ವಿಶ್ವಾಸ ಗಳಿಸಿದರೆ ನಮ್ಮ ಮುಂದಿನ ಜೀವನವು ಸುಖವಾಗಿರುತ್ತದೆ. ಸನ್ಮಾನದಿಂದ ನಮ್ಮ ಜವಾಬ್ದಾರಿ ಹೆಚ್ಚಾದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಹೆಚ್.ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಎಂ.ಎನ್, ವೈದ್ಯರುಗಳಾದ ಡಿ. ಆನಂದ್, ಬಿ.ಸಂಭ್ರಮ್, ಸಿಂಧು, ಕೃಷ್ಣಮೂರ್ತಿ ರವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಪದಾಧಿಕಾರಿಗಳಾದ ವೆಂಕಟರಾಮು, ಜಯರಾಮಯ್ಯ, ಎಂ.ಎನ್.ನಟರಾಜು, ಪುರಸಭೆ ಮಾಜಿ ಸದಸ್ಯ ಚಿಕ್ಕಣ್ಣ, ಆನಂದ್, ಲತಾನಾರಾಯಣ್, ಶಿವಲಿಂಗಪ್ಪ, ಲೋಕೇಶ್, ಕೀರ್ತಿ ಪತ್ರಕರ್ತ ಜಿ.ನಾರಾಯಣರಾಜು ಮತ್ತಿತರರು ಉಪಸ್ಥಿತರಿದ್ದರು.