ಕೊರೊನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ವಿಮಾನಯಾನ ರದ್ದು : ಸಂಸದ ಜಿ.ಎಂ.ಸಿದ್ದೇಶ್ವರ

ದಾವಣಗೆರೆ: ಬ್ರಿಟನ್‍ನಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‍ನ ಹೊಸ ಸ್ವರೂಪದ ಸೋಂಕು ಭಾರತದಲ್ಲಿ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ವಿಮಾನಯಾನ ರದ್ದು ಮಾಡಿದೆ. ಅಲ್ಲದೆ, ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಕಫ್ರ್ಯೂ ಸಹ ವಿಧಿಸಲಾಗಿದೆ. ಸೋಂಕಿನ ಹರಡುವಿಕೆ ಹೆಚ್ಚಾದರೆ ಲಾಕ್‍ಡೌನ್ ಸಹ ಮಾಡುವ ಸಾಧ್ಯತೆ ಇದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದ ಡಿಸಿ ಕಚೇರಿ ಎದುರು ದೂಡಾದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬ್ರಿಟನ್‍ನಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‍ನ ಹೊಸ ಸ್ವರೂಪದ ಸೋಂಕು ಕೋವಿಡ್-19ಗಿಂತ ಭೀಕರವಾಗಿದೆ. ಹೀಗಾಗಿ ಅಲ್ಲಿಂದ ನಮ್ಮ ದೇಶಕ್ಕೆ ಬಂದವರಿಗೆ ಕೊರೊನಾ ಪರೀಕ್ಷೆ ನಡೆಸಿ, ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡಬಾರದು. ನಾನು ಸಹ ಮದುವೆ ಸೇರಿದಂತೆ ಇತರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ನೋಡಿದ್ದೇನೆ. ಒಬ್ಬರೂ ಮಾಸ್ಕ್ ಧರಿಸುತ್ತಿಲ್ಲ. ಇಂತಹ ಜನರ ಬೇಜವಾಬ್ದಾರಿಯಿಂದ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅನಗತ್ಯವಾಗಿ ಯಾರೂ ಮನೆಯಿಂದ ಹೊರ ಬರಬಾರದು. ಬಂದರೂ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯಾದ್ಯಂತ ನಡೆಯುತ್ತಿರುವ ಗ್ರಾ.ಪಂ. ಚುನಾವಣೆ ಮತ್ತು ಬೆಳಗಾವಿ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಅಲ್ಲದೆ, ಈಗ ಧನುರ್ಮಾಸ ಇರುವುದರಿಂದ ಸಚಿವ ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳು ಮನಸ್ಸು ಮಾಡಿಲ್ಲ. ಜ.14ರ ಬಳಿಕ ಅಂದರೆ, ಸಂಕ್ರಾಂತಿ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗುವುದು ನಿಶ್ಚಿತ ಎಂದರು.
ನಮ್ಮ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದು ಮುಖ್ಯಮಂತ್ರಿಗಳಲ್ಲಿ ಕೇಳಿದ್ದೇವೆ. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಬಿಜೆಪಿ ಶಾಸಕರ ಪೈಕಿ ಯಾರಿಗೇ ಸಚಿವ ಸ್ಥಾನ ನೀಡಿದರೂ ಎಲ್ಲರೂ ಸಮಾಧಾನವಾಗಿರಲಿದ್ದಾರೆ. ಅಧಿಕಾರದಲ್ಲಿರುವವರ ಪೈಕಿ ಜನ ಸಂಘದ ಕಾಲದಿಂದಲೂ ಬಂದವರು ಯಾರಾದರೂ ಇದ್ದರೇ ಅದು ಎಸ್.ಎ.ರವೀಂದ್ರನಾಥ್ ಒಬ್ಬರೇ, ಅವರಿಗೆ ಸಚಿವ ಸ್ಥಾನ ಕೊಟ್ಟರೇ ಇನ್ನೂ ಹೆಚ್ಚು ಸಂತೋಷವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹಾಜರಿದ್ದರು.