ಕೊರೊನಾ ವಿರುದ್ಧ ಲಾಕ್‌ಡೌನ್, ಮುನ್ನಚ್ಚರಿಕೆ ಕ್ರಮ

ಕೋಲಾರ, ಮೇ ೨:ಕೋವಿಡ್-೧೯ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್ ಆದೇಶ ಹೊರಡಿಸಿರುವುದನ್ನು ಕೆಜಿಎಫ್ ಪೊಲೀಸ್ ಇಲಾಖೆಯು ಪಾಲಿಸುತ್ತಿದೆ ಹಾಗೂ ಈ ಸಂಬಂಧ ಹಲವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ತಿಳಿಸಿದರು.
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಹದ್ದಿನ ಗಡಿಯಲ್ಲಿರುವ ಅಂತರರಾಜ್ಯ ಗಡಿಗಳನ್ನು ಮುಚ್ಚಲಾಗಿದ್ದು, ಜಿಲ್ಲೆಯಾದ್ಯಂತ ಎಲ್ಲಾ
ಕಡೆಗಳಲ್ಲೂ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು, ೨೪ ಗಂಟೆಗಳೂ ಸಹ ಒಳಬರುವ, ಹೊರಹೋಗುವ ಎಲ್ಲಾ ವಾಹನಗಳು, ಸಾರ್ವಜನಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ, ಜಿಲ್ಲೆಯಾದ್ಯಂತ
ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ವಿವರಿಸಿದರು. ಕೊರೋನಾ ಸೊಂಕು ಹರಡುವಿಕೆಯನ್ನು ತಡೆಯುವಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್ ಆದೇಶಿಸಿದ್ದು, ಸಾರ್ವಜನಿಕರು ಸುರಕ್ಷತೆಯಿಂದ ಮನೆಯಲ್ಲಿದ್ದರೆ ಉತ್ತಮವೆಂದು ತಿಳುವಳಿಕೆ ನೀಡಲಾಗಿದೆ, ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ಕರಪತ್ರಗಳನ್ನು ಮುದ್ರಿಸಿ
ಹಂಚಲಾಗಿದೆ. ಅತ್ಯವಶ್ಯಕ ವಾಹನಗಳ ಓಡಾಟಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ, ಜನಸಾಮಾನ್ಯರು ಕೋವಿಡ್-೧೯ ವೈರಾಣು ಹರಡುವಿಕೆಯ ಸಂಬಂಧ ಅತ್ಯವಸರ ಸಂದರ್ಭಗಳಲ್ಲಿ ಜಿಲ್ಲಾ ಕೋವಿಡ್ ಸಹಾಯವಾಣಿ ೧೦೪ ಅಥವಾ ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣಾ ಸಹಾಯವಾಣಿ ೧೦೭೭ನ್ನು, ಇಆರೆಸ್‌ಎಸ್‌ನ ೧೧೨ ಅಥವಾ ಪೊಲೀಸ್ ಕಂಟ್ರೋಲ್ ರೂಂ: ೦೮೧೫೩-
೨೭೪೭೪೩ನ್ನು ಸಂಪರ್ಕಿಸಬಹುದಾಗಿದೆಯೆಂದು ಅವರು ವಿವರಿಸಿದ್ದಾರೆ.
ಕೆಜಿಎಫ್ ಪೊಲೀಸ್ ಜಿಲ್ಲೆಯು ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಗಡಿ ಭಾಗದಲ್ಲಿದ್ದು, ಅಂತರರಾಜ್ಯ ವಾಹನಗಳು ಯಾವುದೂ ಒಳಬರದಂತೆ, ಹೊರಹೋಗದಂತೆ
ತಪಾಸಣೆ ನಡೆಸಲು ಚೆಕ್‌ಪೊಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಕೆಜಿಎಫ್ ಸರಹದ್ದಿನ ರಾಜ್‌ಪೇಟ್‌ರೋಡ್, ವೆಂಕಟಾಪುರ, ಕೆಂಪಾಪುರ, ಬಲಮಂದೆ, ದೊಡ್ಡಪೊನ್ನಾಂಡಹಳ್ಳಿ ಸೇರಿದಂತೆ ೫ ಕಡೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದು, ೨೪ ಗಂಟೆಗಳ ಕಾಲ ನಿರಂತರವಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಬಿ.ಕೆ.ಉಮೇಶ್ ಅವರ ನೇತೃತ್ವದಲ್ಲಿ ೨೫ ತಂಡಗಳನ್ನು ರಚಿಸಲಾಗಿದ್ದು, ಕೆಜಿಎಫ್ ಪೊಲೀಸ್ ಜಿಲ್ಲೆಯ ಗಡಿಭಾಗವಾದ ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳ ಗಡಿಗಳಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳನ್ನು ನಿರಂತರವಾಗಿಪರಿಶೀಲಿಸಲಾಗುತ್ತಿದೆ. ಅಲ್ಲದೆ, ಕಾನೂನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುತ್ತಿದೆ. ಕೆಜಿಎಫ್ ಪೊಲೀಸ್ಜಿಲ್ಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ಸರ್ಕಾರದ ಲಾಕ್‌ಡೌನ್ ನಿಷೇದಾಜ್ಞೆಯನ್ನು ಉಲ್ಲಂಘನೆ ಮಾಡಿರುವವರ ವಿರುದ್ದ ಕಲಂ ೧೮೮ ಐಪಿಸಿ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು, ೯೩ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಮಾಸ್ಕ್ ಧರಿಸದ ಸುಮಾರು ೫೦೦೦ ಮಂದಿಗೆ ದಂಡ ವಿಧಿಸಲಾಗಿರುತ್ತದೆ. ಕೆಜಿಎಫ್‌ನ ಎಂ.ಜಿ.ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶವಿಲ್ಲವಾದ್ದರಿಂದ ತರಕಾರಿಗಳ ಹರಾಜು ಪ್ರಕ್ರಿಯೆಯನ್ನು ಮಲಯಾಳಿ ಮೈದಾನದಲ್ಲಿ ಮುಂಜಾನೆ ನಡೆಸಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೆಜಿಎಫ್ ನಗರದಾದ್ಯಂತ ಹಲವೆಡೆಗಳಲ್ಲಿ ಸಾರ್ವಜನಿಕರ ಹಿತಾಸಕ್ತಿಯಿಂದ ತರಕಾರಿಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ.