ಕೊರೊನಾ ವಾರಿಯರ್ಸ್‌ಗಳಿಗೆ ಮಂಗಳೂರು ಪೊಲೀಸರಿಂದ ಗೌರವ

ಮಂಗಳೂರು, ಜೂ.೫- ತನ್ನ ಕರ್ತವ್ಯದ ಸಂದರ್ಭದಲ್ಲಿಯೇ ಕೋವಿಡ್ ಸೋಂಕಿಗೆ ಒಳಗಾಗಿ ಐಸೋಲೇಶನ್‌ನಲ್ಲಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಸಿಬ್ಬಂದಿಯ ಸಾಕ್ಷಚಿತ್ರದ ಮೂಲಕ ಮಂಗಳೂರು ಪೊಲೀಸರು ಕೊರೊನಾ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿನ್ನೆ ‘ಕೋವಿಡ್ ಜರ್ನಿ ಆಫ್ ಎ ಕಾಪ್- ಪೊಲೀಸ್ ಸಿಬ್ಬಂದಿಯ ಕೋವಿಡ್ ಪಯಣ’ ಎಂಬ ಐದು ನಿಮಿಷಗಳ ಸಾಕ್ಷಚಿತ್ರವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬಿಡುಗಡೆಗೊಳಿಸಿದರು. ಕೋವಿಡ್ ಎರಡನೆ ಅಲೆ ತೀವ್ರ ಆತಂಕವನ್ನು ಸೃಷ್ಟಿಸಿರುವ ಜತೆಗೆ ಸಾಕಷ್ಟು ತೊಂದರೆಯನ್ನೂ ನೀಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪೊಲೀಸರು, ವೈದ್ಯರು, ಆರೊಗ್ಯ ಕಾರ್ಯಕರ್ತರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮುಂಚೂಣಿಯಲ್ಲಿದ್ದು ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಗೌರವ ಹಾಗೂ ಧೈರ್ಯ ತುಂಬುವ ನಿಟ್ಟಿನಲ್ಲಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರುಣ್ ಆಳ್ವ ಅವರ ಕೋವಿಡ್ ಅನುಭವ ಹಾಗೂ ಅನಿಸಿಕೆಯನ್ನು ಸಾಕ್ಷಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಐದು ನಿಮಿಷಗಳ ಈ ಸಾಕ್ಷ ಚಿತ್ರವನ್ನು ಕಲಾವಿದ ರಾಹುಲ್ ವಶಿಷ್ಟ ಅವರು ನಿರ್ದೇಶಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಕೋವಿಡ್ ಪ್ರಥಮ ಅಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ೩೩೦ ಮಂದಿ ಸೋಂಕಿಗೊಳಾಗಿ ಒಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ೨ನೆ ಅಲೆಯಲ್ಲಿ ಈವರೆಗೆ ೮೮ ಮಂದಿ ಸೋಂಕಿತರಾಗಿ ಓರ್ವರನ್ನು ಇಲಾಖೆ ಕಳೆದುಕೊಂಡಿದೆ ಎಂದು ಅವರು ಹೇಳಿದರು. ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್, ಸಾಕ್ಷಚಿತ್ರ ನಿರ್ದೇಶಕ ರಾಹುಲ್ ವಶಿಷ್ಟ, ಸಾಕ್ಷಚಿತ್ರದ ಪಾತ್ರಧಾರಿ ಹಾಗೂ ಪೊಲೀಸ್ ಕಮಿಷನರ್ ವಾಹನ ಚಾಲಕ ಅರುಣ್ ಆಳ್ವ ಉಪಸ್ಥಿತರಿದ್ದರು.