ಕೊರೊನಾ ವರದಾನ ೨೨೨ ಮಂದಿ ಕೈದಿಗಳಿಗೆ ಬಿಡುಗಡೆ ಭಾಗ್ಯ


ಬೆಂಗಳೂರು,ಮೇ.೨೮- ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರುವ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳ ಪಾಲಿಗೆ ಮಹಾಮಾರಿ ಕೊರೊನಾ ವರದಾನವಾಗಿದ್ದು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಜೀವಾವಧಿ ಸಜೆಯಲ್ಲಿದ್ದ ಕೈದಿಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಲಾಗುತ್ತಿದೆ.
ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಪರಪ್ಪನ ಅಗ್ರಹಾರ ದ ಕೇಂದ್ರ ಕಾರಾಗೃಹದಲ್ಲಿ ಒಟ್ಟು ೨೨೨ ಮಂದಿ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳು ಬಿಡುಗಡೆ ಮಾಡಲಾಗಿದೆ.
ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ಅನುಭವಿಸಿರುವ ೫ ಕೈದಿಗಳು ೮೨ ಮಂದಿ ಸಜಾಬಂಧಿಗಳನ್ನು ಪೆರೋಲ್ ಮೇಲೆ ಬಿಡಲಾಗಿದೆ ಇದರ ಜೊತೆಗೆ ೩೫ ಮಂದಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಜೈಲುಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಕಳೆದ ವರ್ಷ ಮಾ.೨೩ ರಂದು ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದಂತೆ ರಾಜ್ಯ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗಿತ್ತು.
ಕಳೆದ ಮೇ ೭ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ್ ರೆಡ್ಡಿ ಇರುವ ಏಕ ಸದಸ್ಯ ಪೀಠ ನಿರ್ದೇಶನ ನೀಡಿತ್ತು.
ಕೊಲೆ,ಕಳ್ಳತನ, ಆತ್ಯಾಚಾರ, ಪೊಕ್ಸೊ ಕೇಸ್ ಹೊರತುಪಡಿಸಿ ಕಳ್ಳತನ, ಅಪಹರಣ, ವಂಚನೆ ಸೇರಿದಂತೆ ೭ ವರ್ಷಗಳಿಗಿಂತ ಕಡಿಮೆ ಶಿಕ್ಷೆಯಿರುವ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೧೦೫ ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧ ಜೈಲುಗಳಲ್ಲೂ ಸಹ ಕೈದಿಗಳ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ.
೮೨ ಕೈದಿಗಳು ರಿಲೀಸ್:
ಕೊರೊನಾ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆಗೊಳಿಸಲು ರಾಜ್ಯದಲ್ಲಿರುವ ೪೭ ಸೆರೆಮನೆಗಳಲ್ಲಿರುವ ಕೈದಿಗಳನ್ನು ಪೆರೋಲ್? ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ನಗರದ ಕೇಂದ್ರ ಕಾರಾಗೃಹದ ೮೨ ಮಂದಿ ಕೈದಿಗಳಿಂದ ಮುಚ್ಚಳಿಕೆ ಬರೆಯಿಸಿಕೊಂಡು ೯೦ ದಿನಗಳ ಕಾಲ ಪೆರೋಲ್ ನೀಡಲಾಗಿದೆ. ಓರ್ವ ಕೈದಿ ವರ್ಷದಲ್ಲಿ ಗರಿಷ್ಠ ೯೦ ದಿನಗಳು ಪೆರೋಲ್? ಪಡೆಯಬಹುದಾಗಿದೆ.
೩೫ ಸಜಾಬಂಧಿಗಳು:
ಕೊಲೆ, ಆತ್ಯಾಚಾರ ಸೇರಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ೩೪ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ದೇವನಹಳ್ಳಿ ಬಯಲು ಬಂಧೀಖಾನೆಯ ಓರ್ವ ಸಜಾಬಂಧಿ ಸೇರಿದಂತೆ ೩೫ ಕೈದಿಗಳಿಗೆ ಬಿಡುಗಡೆ ಭಾಗ್ಯ ನೀಡಲಾಗಿದೆ.
ಸನ್ನಡತೆ ಮೇರೆಗೆ ಕೈದಿಗಳನ್ನು ಬಿಡುಗಡೆಗೊಳಿಸಲು ಕಳೆದ ವರ್ಷ ರಾಜ್ಯ ಸರ್ಕಾರಕ್ಕೆ ಕಾರಾಗೃಹ ಇಲಾಖೆ ಪಟ್ಟಿ ಕಳುಹಿಸಿತ್ತು. ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಅನುಮತಿ ಪಡೆದು ಬಿಡುಗಡೆ ಅನುಮತಿ ನೀಡಿದ ಹಿನ್ನೆಲೆ ಬುಧವಾರ ೩೫ ಮಂದಿ ಬಿಡುಗಡೆಯಾಗಿದ್ದಾರೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ