ಕೊರೊನಾ ಲೆಕ್ಕ – ಪಕ್ಕಾ ಸಿಎಂ ತಿರುಗೇಟು


ಹಾಸನ,ಜೂ.೧೧- ಕೊರೊನಾ ಸಾವಿನ ಸುಳ್ಳು ಲೆಕ್ಕ ಕೊಟ್ಟು ನಮಗೇನು ಆಗಬೇಕು, ಸಾವಿನ ವಿಚಾರದಲ್ಲಿ ಸರಿಯಾದ ಮಾಹಿತಿಯನ್ನೇ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಸನ ಜಿಲ್ಲೆಯ ಕೊರೊನಾ ಸ್ಥಿತಿಗತಿಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಹಾಸನದ ಭುವನಹಳ್ಳಿ ಹೆಲಿ ಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿರುವುದರಿಂದ ಸೋಂಕು ನಿಗ್ರಹಕ್ಕೆ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಲು ಆರೋಗ್ಯ ಸಚಿವ ಸುಧಾಕರ್ ಜತೆ ಬಂದಿದ್ದೇನೆ. ಜಿಲ್ಲೆಯಲ್ಲಿ ಸೋಂಕನ್ನು ಶೇ. ೫ಕ್ಕಿಂತ ಕಡಿಮೆ ಮಾಡಿದರೆ,ಒಂದಿಷ್ಟು ನಿರಾಳ ಆಗುತ್ತದೆ ಎಂದರು.
ಕೊರೊನಾ ಸಾವಿಗೆ ಸಂಬಂಧಿಸಿದಂತೆ ಸರ್ಕಾರ ಸುಳ್ಳು ಲೆಕ್ಕ ಕೊಡುತ್ತಿದೆ. ನಿಜ ಮಾಹಿತಿಯನ್ನು ಮುಚ್ಚಿಟ್ಟಿದೆ ಎಂಬ ವಿಪಕ್ಷ ನಾಯಕರ ಅರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಾವಿನ ಸುಳ್ಳು ಲೆಕ್ಕ ಕೊಟ್ಟು ನಮಗೇನು ಆಗಬೇಕು. ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ. ಎಲ್ಲವೂ ಸರಿಯಾಗಿಯೇ ನಿರ್ವಹಣೆ ಮಾಡಲಾಗಿದೆ ಎಂದರು.
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಮಾಜಿ ಸಚಿವ ರೇವಣ್ಣ ಅವರ ಮಾತು ಸರಿಯಲ್ಲ. ಅವರು ಜವಾಬ್ದಾರಿ ಶಾಸಕ, ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಉಪಸ್ಥಿತರಿದ್ದರು.