ಕೊರೊನಾ ಲಾಕ್ ಡೌನ್ : ಪ್ಯಾಕೇಜ್ ಪ್ರಕಟಕ್ಕೆ ಡಿಕೆಶಿ ಆಗ್ರಹ

ಬೆಂಗಳೂರು,ಮೇ18-:ಕೊರೋನಾ ಲಾಕ್ ಡೌನ್ ಸಂತ್ರಸ್ತರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಲೇಬೇಕು ಎಂದು ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೊರೋನಾ ಸೋಂಕು ಸರ್ಕಾರವೇ ಕೊಟ್ಟಿರುವ ಕಾಯಿಲೆ. ಜಾತಿ, ಧರ್ಮ, ಪಕ್ಷಬೇಧ ಈ ರೋಗಕ್ಕಿಲ್ಲ. ಬೇರೆ, ಬೇರೆ ಜಿಲ್ಲೆ, ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

ಕೊರೋನಾ ಚಿಕಿತ್ಸೆ ಪಡೆದು ನೆಗೆಟಿವ್ ಬಂದ ಮೇಲೂ ಜನ ಸಾಯುತ್ತಿದ್ದಾರೆ. ನನ್ನ ಆಪ್ತರೂ ಈ ರೀತಿ ಮೃತಪಟ್ಟಿದ್ದು ನೋಡಿ ಆತಂಕವಾಗಿದೆ. ಈ ಬಗ್ಗೆ ವೈದ್ಯರ ಜತೆ ಮಾತನಾಡಿ ಪ್ರಧಾನಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದರು.

ಪಂಚ‌ ಪರಿಹಾರ:

3ನೇ ಅಲೆಯಲ್ಲಿ ಸೋಂಕು ಮಕ್ಕಳಲ್ಲಿ ಹರಡಿದರೆ ಸ್ಥಿತಿ ಏನು ಎಂದು ಭಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ “ಪಂಚ ಪರಿಹಾರ “ಅಂತಾ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಗೊಬ್ಬರದ ಬೆಲೆ ಗಗನಕ್ಕೇರಿದೆ. ಗೊಬ್ಬರ ಉತ್ಪಾದನೆ ಕಾರ್ಖಾನೆ ಮುಚ್ಚಿಸಬಾರದು ಎಂದು ಕೇಂದ್ರ ಸಚಿವ ಸದಾನಂದಗೌಡರಿಗೆ ಹೇಳುತ್ತೇನೆ. ಈ ಕಾರ್ಖಾನೆಗಳು ಮುಚ್ಚಿದರೆ ಗೊಬ್ಬರದ ಅಭಾವ ಸೃಷ್ಟಿಯಾಗಿ, ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದರು.

ಇನ್ನು ಹೂ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲವಾಗಿದೆ. ಹಣ್ಣು, ತರಕಾರಿ ಬೆಳೆಗಾರರು ತಮ್ಮ ಬೆಳೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಜತೆಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೋದ್ಯಮಿಗಳಿಗೂ ನೆರವಾಗಬೇಕು. ಹೊಟೇಲ್ ನಡೆಸುವವರ ಸ್ಥಿತಿ ದೇವರೇ ಕಾಪಾಡಬೇಕು ಎಂದು ಹೇಳಿದರು.

ಕಳೆದ ವರ್ಷ ಘೋಷಿಸಿದ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಈವರೆಗೂ ಯಾರಿಗೂ ತಲುಪಿಲ್ಲ ಎಂದ ಅವರು ಸವಿತಾ ಸಮಾಜ, ರೈತರು, ಮಡಿವಾಳ, ನೇಕಾರರು, ಚಾಲಕರು, ಬೀದಿ ವ್ಯಾಪಾರಿಗಳು ಯಾರಿಗೂ ಪರಿಹಾರ ನೀಡಿಲ್ಲ. ಎಲ್ಲವೂ ಬೋಗಸ್ ಎಂದರು.

ಪರಿಹಾರ: ಪಟ್ಟಿ ಬಿಡುಗಡೆ ಮಾಡಿ

ಜನರಿಗೆ ಸಹಾಯ ಮಾಡಲು ಇವರಿಗೆ ಮನಸ್ಸಿಲ್ಲ. ಮನಸ್ಸು ಇದ್ದಿದ್ದರೆ ಅಕ್ಕಿಯನ್ನು 2 ಕೆ.ಜಿ.ಗೆ ಇಳಿಸುತ್ತಿರಲಿಲ್ಲ. ಈಗ ಕೇಂದ್ರ 5 ಕೆ.ಜಿ. ನೀಡಲು ಮುಂದಾಗಿದೆ. ಜನರಿಗೆ ಸಹಾಯ ಮಾಡಲು ಹೃದಯ ಶ್ರೀಮಂತಿಕೆ ಬೇಕು.ಈ ಸರ್ಕಾರಕ್ಕೆ ಅದು ಇಲ್ಲ ಎಂದು ಹೇಳಿದರು.

ಸರ್ಕಾರಕ್ಕೆ ಕೊರೋನಾ ಎಂಬುದು ಹಬ್ಬವಾಗಿದೆ. ಇದರಲ್ಲೂ ಹಣ ಮಾಡಲು ಮುಂದಾಗಿದೆ. ಲಸಿಕೆ ನೀಡುವುದು ಕೇಂದ್ರದ ಕೆಲಸ. ರಾಜ್ಯ ಸರಕಾರವೇಕೆ ಜಾಗತಿಕ ಟೆಂಡರ್ ಕರೆಯಬೇಕು? ಇಲ್ಲಿ ಏಜೆಂಟ್ ಇಟ್ಟುಕೊಂಡು ಕಮಿಷನ್ ಹೊಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ನಮಗೂ ಮಾಹಿತಿ ಇದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ ಎಂದರು.

100 ಕೋಟಿ ರುಪಾಯಿ ಲಸಿಕಾ ಕಾರ್ಯಕ್ರಮಕ್ಕೆ ಅನುಮತಿ ನೀಡಲಿ. ಹೇಗೆ ಲಸಿಕೆ ವಿತರಿಸಬೇಕು ಎಂಬುದನ್ನು ನಾವು ಮಾಡಿ ತೋರಿಸುತ್ತೇವೆ. ಖಾಸಗಿ ಸಂಸ್ಥೆಗಳು, ಆಸ್ಪತ್ರೆಗಳು ಸಲ್ಲಿಸುತ್ತಿರುವ ಸೇವೆ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜತೆ ಮಾತನಾಡಿ ಎಂದು ನಾನು ಹೇಳಿ ಬಹಳ ದಿನ ಆಯಿತು. ಈಗ ಕೆಲವರನ್ನು ಕರೆದು ಮಾತನಾಡುತ್ತಿದ್ದಾರೆ. ಕರ್ನಾಟಕ ದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯವಿರುವ ರಾಜ್ಯ. ಇಲ್ಲಿ ವಿಫಲರಾದರೆ ಈ ಸರ್ಕಾರದಿಂದ ಇನ್ನೇನು ತಾನೇ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಸರಕಾರದಲ್ಲಿ ಜಗಳ, ಯುದ್ಧ ನಡೆಯುತ್ತಿದ್ದು, ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಪಾಪ ಮುಖ್ಯಮಂತ್ರಿಗಳು ಓದುತ್ತಿದ್ದಾರೆ, ನಾವು ಕೇಳುತ್ತಿದ್ದೇವೆ. ರಾಜ್ಯದ ನಾಯಕತ್ವದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ನಂಬಿಕೆ ಇಲ್ಲ. ಹೀಗಾಗಿ ಪ್ರಧಾನ ಮಂತ್ರಿಗಳು 17 ಜಿಲ್ಲಾಧಿಕಾರಿಗಳ ಜತೆ ಸಭೆ ಮಾಡುತ್ತಿದ್ದಾರೆ. ಸಚಿವರ ಜತೆ ಮಾಡುತ್ತಿಲ್ಲ ಎಂದರು.