ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮನವಿ

ಹುಳಿಯಾರು, ಏ. ೨೦- ಕೊರೊನಾ ಸೋಂಕಿನ ಎರಡನೇ ಅಲೆಯ ಆತಂಕವಿದೆ. ೪೫ ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಲು ಸ್ವಪ್ರೇರಣೆಯಿಂದ ಮುಂದೆ ಬರಬೇಕು ಎಂದು ಹುಳಿಯಾರಿನ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಲ್.ಆರ್. ಚಂದ್ರಶೇಖರ್ ಮನವಿ ಮಾಡಿದರು.
ಹುಳಿಯಾರಿನ ವಾಸವಿ ಕಲ್ಯಾಣ ಮಂಟಪದಲ್ಲಿ ಆರೋಗ್ಯ ಇಲಾಖೆ, ಪಟ್ಟಣ ಪಂಚಾಯ್ತಿ ಹಾಗೂ ಆರ್ಯವೈಶ್ಯ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೊರೊನಾ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇದಕ್ಕೆ ನಾನೇ ಉದಾಹರಣೆಯಾಗಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡು ಎಂದಿನಂತೆ ಕೆಲಸ ಕಾರ್ಯ ಮಾಡಿಕೊಂಡು ಆರೋಗ್ಯದಿಂದ ಇದ್ದೇನೆ. ಪ್ರತಿಯೊಬ್ಬರೂ ಇದು ನಮ್ಮ ಊರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಊರು ಎಂದರೆ ಒಬ್ಬರಿಗೊಬ್ಬರ ನಡುವೆ ಆಂತರಿಕ ಸಂಬಂಧಗಳಿರುತ್ತವೆ. ಹಾಗಾಗಿ ಯಾರಿಗೋ ಬಂದರೆ ನಮಗೇನು ಎಂಬ ಧೋರಣೆ ಬಿಟ್ಟು ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಬಂದು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದರು.
ಅಭಿಯಾನದಲ್ಲಿ ೧೦೦ ಮಂದಿಗೆ ಕೊರೊನಾ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯೆ ಶೃತಿ, ವರ್ತಕರ ಸಂಘದ ಟಿ.ಆರ್.ನಾಗೇಶ್, ಆರೋಗ್ಯ ಇಲಾಖೆಯ ಮಧು, ವೀಣಾ, ಆಶಾ ಕಾರ್ಯಕರ್ತೆ ಭಾಗ್ಯಮ್ಮ, ಸಿಂಧು, ಶ್ರೀರಂಗ, ರೇವತಿ, ವಾಸವಿ ಯುವಜನ ಸಂಘದ ಟಿ.ಕೆ.ಅಜಯ್, ಜಿ.ಆರ್. ಸನತ್ ಮತ್ತಿತರರು ಉಪಸ್ಥಿತರಿದ್ದರು.