ಕೊರೊನಾ ಲಸಿಕೆ ವೇಗ ಹೆಚ್ಚಳಕ್ಕೆ ಕ್ರಮ: 3 ನೇ ಅಲೆ ತಡೆಯಲು ತಜ್ಞರ ಸಮಿತಿ ರಚನೆ

ಬೆಂಗಳೂರು, ಮೇ.1- ರಾಜ್ಯದಲ್ಲಿ 3ನೇ ಹಂತದ ಕೊರೋನಾ ಸೋಂಕಿನ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ತಜ್ಞರ ಸಮಿತಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೋವಿಡ್ ಲಸಿಕೆ ವೇಗ ಹೆಚ್ಚಿಸುವ ಜೊತೆಗೆ ಕೊರೋನಾ ಸೋಂಕಿನ ರೆಮ್ಡಿಸೀವರ್ ಮತ್ತು ಆಕ್ಸಿಜನ್ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸೂಕ್ತ ಆಡಿಟ್ ವ್ಯವಸ್ಥೆ ರೂಪಿಸಲು ಕೂಡ ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರ ಸಮಾಲೋಚನೆ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಈಗ ನೀಡುತ್ತಿರುವ ಭತ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಸೋಂಕಿತರಾದಲ್ಲಿ ಅವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲು ಸಮ್ಮತಿ ನೀಡಲಾಗಿದೆ.

ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಂಡಲ್ಲಿ ಅವರಿಗೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆ ನೀಡಲು ಕ್ರಮ ಕೈಗೊಳ್ಳುವ ಜೊತೆಗೆ ಕೇಂದ್ರೀಕೃತ ಆಕ್ಸಿಜನೇಷನ್ ವ್ಯವಸ್ಥೆ ಇರುವ ಬೆಡ್ಗಳನ್ನು ಐ.ಸಿ.ಯು. ಬೆಡ್ಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ

ವೈದ್ಯಕೀಯ ವಿದ್ಯಾರ್ಥಿಗಳ ಬಳಕೆ:

ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕಗಳನ್ನು ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮತ್ತು ಸೂಕ್ತ ಇನ್ಸೆಟೀವ್ ನೀಡಲು ನಿರ್ಧರಿಸಲಾಗಿದೆ. ನರ್ಸಿಂಗ್ ಕೋರ್ಸು ಫಾರ್ಮಸಿ ಕೋರ್ಸ್‌ ಫಿಜಿಯೋಥೆರಪಿ ಕೋರ್ಸ್‌, ಆಯುಷ್ ವೈದ್ಯ ಕೋರ್ಸು, ದಂತ ವೈದ್ಯಕೀಯ ಕೋರ್ಸ್‌ ಹಾಗೂ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲೂ ಸಭೆಯಲ್ಲಿ ಸೂಚಿಸಿಲಾಗಿದೆ.

ವಿದೇಶಗಳಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿ ಅವರನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿಲ್ಲದ ರೋಗ ಲಕ್ಷಣರಹಿತ ಸೋಂಕಿತರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದು, ಇದನ್ನು ಕಡಿಮೆಗೊಳಿಸಲು ಟ್ರಯಾಜಿಂಗ್ ಮಾಡಿ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಉಳಿದ ಲಕ್ಷಣರಹಿತ ಸೋಂಕಿತರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿ ಚಿಕಿತ್ಸೆ ಮುಂದುವರೆಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿ ಮೆಡಿಸಿನ್ ಸೌಲಭ್ಯವನ್ನು ಬಲಪಡಿಸಲಾಗುವುದು ಎಂದು ತಿಳಿಸಲಾಗಿದೆ.