ಕೊರೊನಾ ಲಸಿಕೆ ಪರಿಣಾಮ ಕುರಿತ ಐಸಿಎಂಆರ್‌ನಿಂದ ಅಧ್ಯಯನ

ನವದೆಹಲಿ,ಜೂ.೨೧- ದೇಶದಲ್ಲಿ ಕೋವಿಡ್-೧೯ ಲಸಿಕೆ ತೆಗೆದುಕೊಂಡಿದ್ದರ ಪರಿಣಾಮ ಯುವಜನರಲ್ಲಿ ಹಠಾತ್ ಸಾವಿನ ಅಪಾಯ ಹೆಚ್ಚಳವಾಗಿದೆಯೋ ಅಥವಾ ಕಡಿಮೆ ಆಗಿದೆಯೋ ಎನ್ನುವುದನ್ನು ಪರಿಶೀಲಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನ ಕೈಗೊಂಡಿದೆ.
ಹೃದಯ ಸ್ತಂಭನಕ್ಕೆ ಹೆಚ್ಚಾಗಿ ಕಾರಣವಾಗಿರುವ ಯುವಜನರ ಹಠಾತ್ ಸಾವುಗಳ ಬೆಳವಣಿಗೆಯ ಹಿಂದೆ ವಯಸ್ಸು, ಅವರ ರೋಗದ ಹಿನ್ನೆಲೆ, ವಿವಿಧ ರೋಗಲಕ್ಷಣಗಳಂತಹ ಅಂಶಗಳನ್ನು ಪರಿಶೀಲಿಸಲು ಮುಂದಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಬಹ್ಲ್, ಹೇಳಿದ್ದಾರೆ.
ಅಧ್ಯಯನ ಕೈಗೊಂಡಿದ್ದು ಇನ್ನೂ ಈ ಬಗ್ಗೆ “ಫಲಿತಾಂಶಗಳು ಇನ್ನೂ ಲಭ್ಯವಿಲ್ಲ” ಎಂದು ಹೇಳಿದ ಅವರು ಅಧ್ಯಯನದ ಭಾಗವಾಗಿ, ಯುವಜನರಲ್ಲಿ ಇತ್ತೀಚಿನ ಕೆಲವು ಹಠಾತ್ ಸಾವಿನ ಪ್ರಕರಣಗಳನ್ನು ಸಂಶೋಧಕರು ಪರಿಶೀಲಿಸುತ್ತಿದ್ದಾರೆ ಎಂದು ಎಂದಿದ್ದಾರೆ.
ಅವರು ಸತ್ತ ವ್ಯಕ್ತಿಗೆ ಅವರ ಸಾವಿನ ಕಾರಣವನ್ನು ನಿರ್ಧರಿಸಲು ರೋಗಲಕ್ಷಣಗಳು ಮತ್ತು ಸಂದರ್ಭಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಏಮ್ಸ್‌ನ ಕೆಲವು ಉನ್ನತ ಹೃದ್ರೋಗ ತಜ್ಞರು ಮತ್ತು ಫೊರೆನ್ಸಿಕ್ ತಜ್ಞರನ್ನು ಈ ಅಧ್ಯಯನಕ್ಕಾಗಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
“ಹಠಾತ್ ಹೃದಯ ಸ್ತಂಭನದ ಪ್ರಕರಣಗಳು ಹೆಚ್ಚಾಗಲು ಸಂಭವನೀಯ ಕಾರಣಗಳ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳು ಹರಡುತ್ತಿವೆ. ಅನೇಕ ಜನರು ಇದನ್ನು ದೀರ್ಘ ಕೋವಿಡ್ ಮತ್ತು ಕೋವಿಡ್ -೧೯ ಗಾಗಿ ಬಳಸುವ ಲಸಿಕೆಗಳೊಂದಿಗೆ ಜೋಡಣೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಿ ವಿಷಯ ಹೊರಹಾಕಲಾಗುವುದು ಎಂದಿದ್ದಾರೆ.
ಈ ಅಧ್ಯಯನದ ಉದ್ದೇಶ ನಿಜವಾದ ಕಾರಣ ತನಿಖೆ ಮಾಡುವುದು” ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.