ಕೊರೊನಾ ಲಸಿಕೆ ಪಡೆದ ಪರಮೇಶ್ವರ್

ತುಮಕೂರು, ಏ. ೧೬- ನಗರದ ಹೊರವಲಯದ ಅಗಳಕೋಟೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರು ಕೋವಿಡ್-೧೯ ಲಸಿಕೆ ಪಡೆದರು.
ಕೊರೊನಾ ಲಸಿಕೆ ಪಡೆದ ನಂತರ ಮಾತನಾಡಿದ ಡಾ. ಜಿ. ಪರಮೇಶ್ವರ್ ಅವರು, ದೇಶದಲ್ಲಿ ಇತ್ತೀಚೆಗೆ ಕೊರೊನಾ ೨ನೇ ಆರ್ಭಟ ಜಾಸ್ತಿಯಾಗುತ್ತಿದೆ. ಹೀಗಾಗಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದ ಪಾರಾಗಲು ೪೫ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಲಸಿಕೆ ಪಡೆದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿಯಾಗಿ ಸೋಂಕಿನಿಂದ ಪಾರಾಗಬಹುದು. ಯಾರೂ ಸಹ ಹೆದರದೆ ಧೈರ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂದರು.
ಕೊರೊನಾ ಮಹಾಮಾರಿಯ ಆರ್ಭಟ ರಾಜ್ಯ ಮತ್ತು ದೇಶದಲ್ಲಿ ಆರಂಭವಾದಾಗಿನಿಂದಲೂ ನಾನು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೆ. ಅಲ್ಲದೆ ನನ್ನ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಇದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು. ಹಾಗಾಗಿ ಈವರೆಗೆ ಲಸಿಕೆ ಪಡೆದುಕೊಂಡಿರಲಿಲ್ಲ. ಇಂದು ಲಸಿಕೆ ಪಡೆದಿದ್ದೇನೆ ಎಂದರು.
ಈಗ ೪೫ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಂಡರೆ ಒಳ್ಳೆಯದು. ಇದರಿಂದ ಈ ಸೋಂಕನ್ನು ನಿಯಂತ್ರಿಸಲು ಸಾಧ್ಯಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.