ಕೊರೊನಾ ಲಸಿಕೆ ಪಡೆದು ಜೀವ ಉಳಿಸಿಕೊಳ್ಳಿ

ಕಲಬುರಗಿ,‌ಮೇ. 28:ಕೊರೊನಾ ಸೋಂಕಿನ 2 ಅಲೆ ತಗ್ಗುತ್ತಿರಬಹುದು ಆದರೆ, ಮುಂಬರುವ ಎಲ್ಲ ಸಾಧ್ಯತೆಗಳ ಜತೆ ಹೋರಾಟ ಮಾಡಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಾಗಲೇ ನಾವು ಸೋಂಕಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಶೇಖ್‍ರೋಜಾ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿ ಡಾ. ಅನುಪಮಾ ಹೇಳಿದರು.
ನಗರದ ಸೈಯದ್ ಚಿಂಚೋಳಿ ರಿಂಗ್ ರಸ್ತೆಯಲ್ಲಿರುವ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಶುಕ್ರವಾರ ಹಿರಿಯರಿಗೆ ಲಸಿಕೆ ಹಾಕುವ ಕಾರ್ಯಕ್ರಮಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಲಸಿಕೆ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಲಸಿಕೆ ಪಡೆದಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದು ಬಿಟ್ಟರೆ ಇನ್ಯಾವುದೇ ತೊಂದರೆ ಇಲ್ಲ. ಆದರೂ ಕೆಲವರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ. ಅದರ ಹಿಂದಿನ ಕಾರಣ ಏನೇ ಇರಲಿ. ನಿಮ್ಮ ಜೀವ ಉಳಿಸಿಕೊಳ್ಳಲಿಕ್ಕಾದರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾ ಅಂಗವಿಕ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ ಖಾನ್ ಮಾತನಾಡಿ, ಕೊರೊನಾ ಗೆಲ್ಲಬೇಕಾದರೇ ನಾವು ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲದೆ ಹೋದರೆ ಇವತ್ತಿನಕ್ಕಿಂತ ಮುಂದಿನ ದಿನಗಳಲ್ಲಿ ದೊಡ್ಡ ತೊಂದರೆ ಎದುರಿಸಬೇಕಾದೀತು. ಮೂರನೇ ಅಲೆಯಲ್ಲಿ ಮಕ್ಕಳಿಗೂ ಬಾಧಿಸುವ ಮುನ್ನಚ್ಚರಿಕೆ ಈಗಾಗಲೇ ವೈದ್ಯರು ಮತ್ತು ವಿಶ್ವಸಂಸ್ಥೆ ತಜ್ಞರು ನೀಡಿದ್ದಾರೆ. ಹೀಗಿದ್ದರೂ ನಾವಿನ್ನೂ ಯೋಚಿಸುವುದರಲ್ಲೇ ಕಾಲ ಕಳೆಯುತ್ತಿದ್ದೇವೆ. ಕೆಲವರು ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿದ್ದಾರೆ. ನಮ್ಮ ಜನರು ಅದಕ್ಕೆ ಕಿವಿಗೊಡದೆ ಲಸಿಕೆ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ವೃದ್ಧಾಶ್ರಮದಲ್ಲಿÉೂಟ್ಟು 18 ಜನರಿಗೆ ಶುಕ್ರವಾರ ಲಸಿಕೆ ಹಾಕಲಾಯಿತು. ಅಲ್ಲದೆ, ಅವರಿಗೆ ಕೆಲವು ಆರೋಗ್ಯದ ತಿಳಿವು ನೀಡಲಾಯಿತು. ವೃದ್ಧಾಶ್ರಮದ ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಭಾಗೀರಥಿ ವಂದಿಸಿದರು.