ಕೊರೊನಾ ಲಸಿಕೆ ಖಾಲಿ – ಜನ ಪರದಾಟ

ರಾಯಚೂರು.ಏ.೩೦- ನಗರದಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಲಸಿಕೆ ಕೊರತೆ ಉದ್ಭವಿಸಿದ್ದು, ಅನೇಕರು ಇಂದು ಆಯಾ ಆರೋಗ್ಯ ಕೇಂದ್ರಗಳಿಗೆ ತೆರಳಿ, ಲಸಿಕೆಯಿಲ್ಲದೇ, ಮರಳಿ ಬಂದ ಘಟನೆ ನಡೆಯಿತು.
ಸಿಯಾತಲಾಬ್, ಹರಿಜನವಾಡ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಗಾಗಿ ಇಂದು ಅನೇಕ ಜನರು ಆಗಮಿಸಿದ್ದರು. ಆದರೆ, ಲಸಿಕೆ ಇಲ್ಲ ಎನ್ನುವ ಸುದ್ದಿಯಿಂದ ಕೊರೊನಾ ಲಸಿಕೆ ನಿರೀಕ್ಷಿತ ನಾಗರೀಕರು ಕಳವಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಲಸಿಕೆಗಳಿಗೆ ಕೊರತೆ ಇಲ್ಲವೆಂದು ಹೇಳಿದ ಅಧಿಕಾರಿಗಳ ಹೇಳಿಕೆ ಈಗ ಸುಳ್ಳು ಎನ್ನುವುದು ಸ್ಪಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇಂದು ನಗರಕ್ಕೆ ಆಗಮಿಸಿದ ದಿನವೇ ನಗರದಲ್ಲಿ ಕೊರೊನಾ ಲಸಿಕೆ ಸಂಗ್ರಹ ಖಾಲಿಯಾಗಿದ್ದು, ಗಮನಾರ್ಹವಾಗಿದೆ.
ನಾಳೆಯಿಂದ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಘೋಷಣೆ ಒಂದೆಡೆ ಮಾಡಲಾಗಿದೆ. ಮತ್ತೊಂದೆಡೆ ಪೂರ್ವ ಘೋಷಿತ ವಯೋಮಿತಿಯಲ್ಲಿದ್ದವರಿಗೆ ಲಸಿಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆವರೆಗೂ ನಗರದಲ್ಲಿ ಲಸಿಕೆ ನೀಡಲಾಯಿತು. ಆದರೆ, ಇಂದು ಏಕಾಏಕಿ ಲಸಿಕೆ ಇಲ್ಲ ಎನ್ನುವ ಸುದ್ದಿ ತಳಮಳಕ್ಕೆ ಕಾರಣವಾಗಿದೆ. ಕೊರೊನಾ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಆದರೆ, ಲಸಿಕೆಗಳೇ ಇಲ್ಲದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಒಂದೆಡೆ ಕೊರೊನಾಕ್ಕೆ ಚಿಕಿತ್ಸೆ ಕೊರತೆ, ಮತ್ತೊಂದೆಡೆ ಲಸಿಕೆ ಕೊರತೆ ಜನ ತೀವ್ರ ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಲಸಿಕೆ ವ್ಯವಸ್ಥೆಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.