ಕೊರೊನಾ ಲಸಿಕೆ ಕೊರತೆ: ಬ್ರೆಜಿಲ್ ನಲ್ಲಿ ವಿದೇಶಾಂಗ ಸಚಿವರ ರಾಜೀನಾಮೆ

ಬ್ರೆಸಿಲಿಯಾ, ಮಾ 30-ಬ್ರೆಜಿಲ್ ನಲ್ಲಿ ಕೊರೋನಾ ಲಸಿಕೆಗೆ ಕೊರತೆಯ ಉಂಟಾಗಿದ್ದರಿಂದ ಆಕ್ರೋಶ ಭುಗಿಲೆದ್ದ ಹಿನ್ನಲೆಯಲ್ಲಿ ಬ್ರೆಜಿಲ್ ವಿದೇಶಾಂಗ ಸಚಿವ ಸ್ಥಾನಕ್ಕೆ ಅರ್ನೆಸ್ಟೊ ಅರೌಜೊ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬ್ರೆಜಿಲ್ ನಲ್ಲಿ ಹೆಮ್ಮಾರಿ ಕೊರೋನಾ ಸೋಂಕಿನ ಅಬ್ಬರ ತೀವ್ರಗೊಂಡಿದೆ. ಲಸಿಕೆಗಾಗಿ ದೇಶದಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಲಸಿಕೆ ಕೊರತೆ ವಿಚಾರವಾಗಿ ಇದೀಗ ಬ್ರೆಜಿಲ್ ವಿದೇಶಾಂಗ ಸಚಿವರು ರಾಜೀನಾಮೆ ನೀಡಲು ಕಾರಣವಾಗಿದೆ.

ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಕೊರತೆಗೆ ವಿದೇಶಾಂಗ ಸಚಿವ ಅರ್ನೆಸ್ಟೊ ಅರೌಜೊ ಅವರ ರಾಜತಾಂತ್ರಿಕ ಹಿನ್ನಡೆಯೇ ಕಾರಣ. ದೇಶದ ಜನರು ಕೊರೋನಾ ವೈರಸ್ ಸೋಂಕಿನಿಂದ ಸಾಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಸಿಕೆ ಉತ್ಪಾದನಾ ದೇಶಗಳೊಂದಿಗೆ ರಾಜತಾಂತ್ರಿಕವಾಗಿ ಚರ್ಚಿಸಿ ಲಸಿಕೆ ಪಡೆಯುವಲ್ಲಿ ಅರ್ನೆಸ್ಟೊ ಅರೌಜೊ ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದವು.

ಬ್ರೆಜಿಲ್ ನಲ್ಲಿ ಅರ್ನೆಸ್ಟೊ ಅರೌಜೊ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ. ತ್ಯಾಗ ಪತ್ರವನ್ನು ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ರವಾನಿಸಿದ್ದಾರೆ ಎಂದು ಹೇಳಲಾಗಿದೆ.