ಕೊರೊನಾ ಲಸಿಕೆ : ಕಾಂಗ್ರೆಸ್, ಬಿಜೆಪಿ ಪ್ರತಿಷ್ಠೆ – ಸಿಯಾತಲಾಬ್, ೧ ಘಂಟೆ ಲಸಿಕೆ ಸ್ಥಗಿತ

ಅನಕ್ಷರಸ್ಥ ಕೊರೊನಾ ವಾರಿಯರ್ಸ್‌ಗೆ ಅನುಬಂಧ-೩ ಫಾರಂ ತುಂಬುವ ಸಹಾಯಕರು ಯಾರು?
ರಾಯಚೂರು.ಜೂ.೦೪- ಕೊರೊನಾ ವಾರಿಯರ್ಸ್‌ಗೆ ಲಸಿಕೆ ಅತ್ಯಂತ ಮಂದಗತಿಯಲ್ಲಿ ನಡೆದಿದ್ದು, ಲಸಿಕೆ ಕೇಂದ್ರಗಳಲ್ಲಿ ಅನುಬಂಧ-೩ ಫಾರಂ ತುಂಬುವ ನೆರವಿನಲ್ಲೂ ರಾಜಕೀಯ ಪ್ರತಿಷ್ಠೆ ಸಂಘರ್ಷಕ್ಕೆ ಕಾರಣವಾಗಿ ನಿನ್ನೆ ಸಿಯಾತಲಾಬ್‌ನ ಆರೋಗ್ಯ ಕೇಂದ್ರದಲ್ಲಿ ಸುಮಾರು ೧ ಘಂಟೆ ಕಾಲ ಲಸಿಕೆ ಸ್ಥಗಿತಗೊಂಡ ಘಟನೆ ನಡೆಯಿತು.
ವಾರಿಯರ್ಸ್‌ಗೆ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಗೊಂಡಾಗನಿಂದ ಕಾಂಗ್ರೆಸ್ ರವಿ ಬೋಸರಾಜು ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಒಂದು ತಂಡ ಆಯಾ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಳೀಯರಿಗೆ ಅನುಬಂಧ-೩ ಫಾರಂ ತುಂಬುವ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆ ಬಗ್ಗೆ ಸ್ಥಳೀಯ ವೈದ್ಯರೊಂದಿಗೆ ಚರ್ಚಿಸಲಾಗುತ್ತಿತ್ತು. ನಿನ್ನೆ ಇದೇ ರೀತಿ ಸಿಯಾತಲಾಬ್‌ನಲ್ಲಿ ಕೆಲ ಕಾಂಗ್ರೆಸ್ ಯುವಕರು ಸ್ಥಳೀಯರಿಗೆ ಫಾರಂ ತುಂಬಲು ನೆರವಾಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯವರು ಅಲ್ಲಿಗೆ ತೆರಳಿದಾಗ ಕೊಂಚ ಗೊಂದಲ ಉಂಟಾಯಿತು.
ನಂತರ ಕಾಂಗ್ರೆಸ್, ಬಿಜೆಪಿ ಎನ್ನುವ ಲೆಕ್ಕಚಾರದಲ್ಲಿ ಲಸಿಕೆಗೆ ಅಗತ್ಯವಾದ ದಾಖಲೆ ಪರಿಶೀಲನೆ ನಡೆಸಲಾಯಿತು. ಬಿಜೆಪಿಯ ಸದಸ್ಯರೊಬ್ಬರು ಅಲ್ಲಿಂದಲೇ ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಕರೆ ಮಾಡಿದರು ಎನ್ನಲಾಗಿದೆ. ನಂತರ ತಕ್ಷಣವೇ ವೈದ್ಯರಿಗೆ ಕರೆಯೊಂದು ಬಂದಿತು. ಅಲ್ಲಿಯ ವೈದ್ಯರು ಶಾಸಕರನ್ನು ಭೇಟಿಯಾಗಲು ಹೋಗುತ್ತೇನೆಂದು ಅಲ್ಲಿಂದ ತೆರಳುತ್ತಿರುವಾಗ ರವಿ ಬೋಸರಾಜು ಅವರು ಸ್ಥಳಕ್ಕೆ ಬಂದರು ಎಂದು ಹೇಳಲಾಗುತ್ತದೆ. ಆರೋಗ್ಯ ಕೇಂದ್ರದಿಂದ ತೆರಳುತ್ತಿದ್ದ ಅಧಿಕಾರಿಯನ್ನು ತಡೆದು, ಲಸಿಕೆ ಪ್ರಕ್ರಿಯೆ ನಂತರ ತಾವು ಯಾರನ್ನಾದರೂ ಭೇಟಿಯಾಗಿ, ಸದ್ಯ ಲಸಿಕೆ ಪ್ರಕ್ರಿಯೆ ಮುಂದುವರೆಸುವಂತೆ ಹೇಳಿದಂತಹ ಘಟನೆ ನಡೆಸಿಯಿತು.
ನಂತರ ಕಾಂಗ್ರೆಸ್, ಬಿಜೆಪಿ ಅವರ ಸಮ್ಮುಖದಲ್ಲಿಯೇ ಲಸಿಕೆ ಪ್ರಕ್ರಿಯೆ ಆರಂಭಗೊಂಡಿತು. ವೈದ್ಯರು ನಡೆಸಿದ ದೂರವಾಣಿಯಲ್ಲಿ ಸಂಭಾಷಣೆಯಲ್ಲಿ ಅನ್ಯ ಯಾರನ್ನು ಲಸಿಕೆ ಹಾಕುವ ಸ್ಥಳದಲ್ಲಿ ಬಿಡದಿರುವಂತೆ ಸೂಚಿಸಲಾಗಿತ್ತು ಎನ್ನುವ ಅಂಶ ಅಲ್ಲಿಯ ಸ್ಥಳೀಯ ಸಿಬ್ಬಂದಿಯೊಬ್ಬರು ಕಾಂಗ್ರೆಸ್, ಬಿಜೆಪಿಯವರಿಗೆ ಹೇಳಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಲಸಿಕಾ ಕೇಂದ್ರಗಳಲ್ಲಿ ಅನಕ್ಷರಸ್ಥ ವಾರಿಯರ್‌ಗಳಿಗೆ ಅನುಬಂಧ-೩ ಫಾರಂ ತುಂಬಿಕೊಳ್ಳುವುದು ತಪ್ಪೇ? ಈ ಫಾರಂ ತುಂಬಲು ತರಕಾರಿ, ಹಣ್ಣು ಮಾರುವವರಿಗೆ ಸಾಧ್ಯವೇ? ಯಾರಾದರೂ ಸಹಾಯಕು ಬೇಕು ಅಲ್ಲವೇ ಎಂದು ಕೇಳಿದಂತಹ ಘಟನೆ ನಡೆಯಿತೆಂದು ಹೇಳಲಾಗುತ್ತಿದೆ.
ನಿನ್ನೆಯ ಈ ಘಟನೆ ನಂತರ ಇಂದು ಸ್ವತಃ ಶಾಸಕ ಡಾ.ಶಿವರಾಜ ಪಾಟೀಲ್ ಅವರು, ಎಲ್‌ವಿಡಿ ಕಾಲೇಜು ಹತ್ತಿರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಯ ಲಸಿಕೆ ಪರಿಶೀಲಿಸಿದರು. ಸ್ಥಳೀಯ ವೈದ್ಯರೊಂದಿಗೆ ಚರ್ಚಿಸಿ, ಲಸಿಕೆ ಸಂಖ್ಯೆ ಯಾವ ರೀತಿ ಇವುಗಳನ್ನು ನೀಡಲಾಗುತ್ತದೆ ಎನ್ನುವುದನ್ನು ಮಾಹಿತಿ ಪಡೆದರು. ಕೊರೊನಾ ಲಸಿಕೆಗೆ ಸಂಬಂಧಿಸಿ ರಾಜ್ಯದ ಕೆಲವೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಅವರ ಮಧ್ಯೆ ಪ್ರತಿಷ್ಠೆ ಘಟನೆಗಳು ಬೆಳಕಿಗೆ ಬಂದಿದ್ದವು. ಆದರೆ, ಜಿಲ್ಲೆ ಮತ್ತು ನಗರದಲ್ಲಿ ಈ ರೀತಿಯ ಯಾವುದೇ ಘಟನೆಗಳು ವರದಿಯಾಗಿರಲಿಲ್ಲ. ಆದರೆ, ನಿನ್ನೆ ಸಿಯಾತಲಾಬ್‌ನಲ್ಲಿ ಎರಡು ಪಕ್ಷಗಳ ಮಧ್ಯೆ ಲಸಿಕೆ ಹಾಕಿಸುವ ವಿಷಯದಲ್ಲಿ ರಾಜಕೀಯ ಪ್ರತಿಷ್ಠೆ ಬಹಿರಂಗಗೊಂಡಿತು.
ಕೋವಿಡ್ ಸಂದರ್ಭದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ರಾಜಕೀಯ ನೆರಳಿನ ಮಧ್ಯೆ ಜನರಿಗೆ ಸೌಕರ್ಯ ನೀಡುವ ಮತ್ತು ಅವರಿಗೆ ಲಸಿಕೆ ಸೇರಿದಂತೆ ಇನ್ನಿತರ ಸೌಲಭ್ಯ ದೊರೆಯುವಂತೆ ಮಾಡುವ ಪೈಪೋಟಿ ಅನುಕೂಲಕರವಾಗಿದೆ. ಆಳುವ, ಕೇಳುವ ಪ್ರಜಾಪ್ರಭುತ್ವ ವ್ಯವಸ್ಥೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವುದರಿಂದ ಕಳೆದ ಲಾಕ್ ಡೌನ್ ಆರಂಭಗೊಂಡಾಗನಿಂದ ಇಲ್ಲಿಯ ಜನ ಒಬ್ಬರಲ್ಲೊಬ್ಬರಿಂದ ಎಲ್ಲಾ ರೀತಿಯ ನೆರವು ಪಡೆಯುವಲ್ಲಿ ಸಹಕಾರಿಯಾಗಿದೆ.
ಕೋವಿಡ್ ತೀವ್ರ ಗತಿಯ ಆರಂಭದಲ್ಲಿ ಸರಿಯಾದ ಉಸ್ತುವಾರಿಯ ಕೊರತೆ, ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಅವ್ಯವಸ್ಥೆಯಿಂದ ಅನೇಕರು ಜೀವ ಕಳೆದುಕೊಳ್ಳುವಂತೆ ಮಾಡಿತು. ಸಾವಿರಕ್ಕೂ ಅಧಿಕ ಜನ ಸಾಯುವುದಕ್ಕೆ ಸರ್ಕಾರದ ಔಷಧಿ ಪೂರೈಕೆಯ ಕೊರತೆ ದಾರಿಯಾಯಿತು. ಆದರೆ, ಇಲ್ಲಿಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಜಿದ್ದಾಜಿದ್ದಿ ಪೈಪೋಟಿ ನಂತರ ಒಂದೊಂದಾಗಿ ವ್ಯವಸ್ಥೆ ಸುಧಾರಣೆಗೊಂಡು ಒಂದಷ್ಟು ಸಾವಿನ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.
ಲಾಕ್ ಡೌನ್ ಮತ್ತು ಕೊರೊನಾ ಸೋಂಕಿತರ ಕ್ವಾರಂಟೈನ್ ವ್ಯವಸ್ಥೆಯಿಂದಾಗಿ ೬೦೦ ರಿಂದ ೧೦೦೦ ಗಡಿ ದಾಟಿದ ಕೊರೊನಾ ಸಂಖ್ಯೆ ಈಗ ೧೫೦ ರಿಂದ ೨೫೦ ರ ಮಿತಿಯಲ್ಲಿ ಹರಿದಾಡುತ್ತಿದೆ. ಬೆಡ್ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಖಾಲಿ ಬಿದ್ದಿವೆ. ಆಕ್ಸಿಜನ್‌ಗಾಗಿ ಹೆಚ್ಚುವರಿ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ. ಇದು ಒಂದು ರೀತಿ ಜಿಲ್ಲೆ ಮುಂಬರುವ ದಿನಗಳಲ್ಲಿ ಕೊರೊನಾ ಆಪತ್ತು ಎದುರಿಸಲು ಅಗತ್ಯವಾದ ಮೂಲಭೂತ ಸೌಕರ್ಯಗಳಿಗೆ ನೆರವಾಗಿದೆ. ಈ ಪೈಪೋಟಿ ಅಭಿವೃದ್ಧಿ ಕಾರ್ಯಗಳನ್ನು ಕಳೆದ ಒಂದು ದಶಕದಿಂದ ಮುಂದುವರೆದಿದ್ದರೇ, ಕನಿಷ್ಟ ಈ ಕ್ಷೇತ್ರ ಅನೇಕ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವಿದ್ದಾಗ ಡಾ.ಶಿವರಾಜ ಪಾಟೀಲ್ ವಿರೋಧ ಪಕ್ಷದ ಶಾಸಕರಾಗಿದ್ದರು. ಈಗ ಬಿಜೆಪಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಈ ಎರಡು ಅವಧಿಯಲ್ಲಿ ಅಭಿವೃದ್ಧಿಗೆ ಸಂಬಂಧಿಸಿ ಅತ್ತ ಬಿಜೆಪಿ, ಇತ್ತ ಕಾಂಗ್ರೆಸ್ ಕೋವಿಡ್ ಮಾದರಿಯಲ್ಲಿ ಆಳುವ, ಕೇಳುವ ಜವಾಬ್ದಾರಿ ನಿರ್ವಹಿಸಿದ್ದರೇ, ಇಲ್ಲಿಯ ಜನ ತಿಪ್ಪೇಗುಂಡಿ, ಹಾಳು ಬಿದ್ದ ಚರಂಡಿ, ಕಳಪೆ ರಸ್ತೆ, ವಿದ್ಯುತ್ ದೀಪಗಳಿಲ್ಲದ ಬೀದಿಗಳು, ೨೪ ಕುಡಿವ ನೀರಿನ ವಂಚನೆ, ದಿನಕ್ಕೆ ಅನಧಿಕೃತವಾಗಿ ಲೆಕ್ಕವಿಲ್ಲದಷ್ಟು ವಿದ್ಯುತ್ ಕಡಿತ, ಇಂತಹ ಸಮಸ್ಯೆಗಳಿಂದ ಮುಕ್ತವಾಗಿರಲು ಸಾಧ್ಯವಾಗುತ್ತಿತ್ತು.