ಕೊರೊನಾ ಲಸಿಕೆ ಉಚಿತ ನೀಡಿಕೆ


ನವದೆಹಲಿ, ಜ. ೨- ದೇಶದ ಎಲ್ಲಾ ಜನರಿಗೆ ಉಚಿತ ಕೊರೊನಾ ಲಸಿಕೆ ವಿತರಿಸಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸಿಹಿಸುದ್ದಿ ನೀಡಿದ್ದಾರೆ.
ನಿನ್ನೆಯಷ್ಟೇ ಕೋವಿ ಶೀಲ್ಡ್ ಲಸಿಕೆಯನ್ನು ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ ನೀಡಿರುವ ಬೆನ್ನಲ್ಲೆ ಕೊರೊನಾದಿಂದ ತತ್ತರಿಸಿರುವ ದೇಶದ ಜನತೆಗೆ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ಲಸಿಕೆ ವಿತರಿಸಲು ಸಜ್ಜಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಸರ್ಕಾರ ದೇಶದ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈರನ್ ಆರಂಭಿಸಿದ್ದು, ಡಾ. ಹರ್ಷವರ್ಧನ್ ಇಂದು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿ ಪರಾಮರ್ಶೆ ನಡೆಸಿದರು.
ಕೋವಿಡ್ ಲಸಿಕೆಯ ಸಾಧ್ಯ ಸಾಧ್ಯತೆಯ ಕಾರ್ಯಾಚರಣೆ, ಡ್ರೈರನ್ ಬಳಕೆ, ಸಂಪರ್ಕ ಮತ್ತು ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಲಸಿಕೆಯನ್ನು ಉಚಿತವಾಗಿ ವಿತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೇವಲ ದೆಹಲಿ ಮಾತ್ರವಲ್ಲ, ಇಡೀ ದೇಶದಲ್ಲೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಕೋವಿಡ್-೧೯ ಲಸಿಕೆ ದೇಶದ ಜನತೆಗೆ ಉಚಿತವಾಗಿ ದೊರಕಲಿದೆ ಎಂದು ಆಶ್ವಾಸನೆ ನೀಡಿದರು.
ಸದ್ಯ ದೆಹಲಿಯಲ್ಲಿ ಕೊರೊನಾಗೆ ಔಷಧಿ iತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಮಹಾಮಾರಿ ಕೊರೊನಾವನ್ನು ನಿಗ್ರಹಿಸಲು ಭಾರತ ಬಳಸಲಿರುವ ಕೊರೊನಾ ನಿರ್ಮೂಲನಾ ಲಸಿಕೆಯ ಸುರಕ್ಷತೆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಹಾಗೂ ಈ ಲಸಿಕೆಯ ಸುರಕ್ಷತೆ, ಅಡ್ಡಪರಿಣಾಮಗಳ ಬಗ್ಗೆ ಕೇಳಿ ಬರುತ್ತಿರುವ ವದಂತಿಗಳಿಗೆ ತೆರೆ ಎಳೆಯಲು ಲಸಿಕೆಯನ್ನು ಕೂಲಂಕುಷವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದರು.
ಕೊರೊನಾಗೆ ರಾಮಬಾಣವಾಗಿ ಮುಂದಿನ ದಿನಗಳಲ್ಲಿ ಭಾರತ ಬಳಸಲಿರುವ ಕೊರೊನಾ ಲಸಿಕೆಗಳನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಲಸಿಕೆಯ ಸುರಕ್ಷತೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅಡ್ಡಪರಿಣಾಮಗಳಾಗಲಿವೆ ಎಂಬ ವದಂತಿಗಳಿಗೆ ತೆರೆ ಎಳೆಯಲು ಲಸಿಕೆಯ ಸಮಗ್ರ ತಪಾಸಣೆ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಲಸಿಕೆ ನೀಡಿಕೆಯ ಸಂದರ್ಭದಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಇಂದು ದೇಶಾದ್ಯಂತ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ. ಲಸಿಕೆ ನೀಡಿಕೆಗೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪೊಲೀಯೋ ಲಸಿಕೆಯನ್ನು ದೇಶದಲ್ಲಿ ಮೊದಲಿಗೆ ಬಳಸಿದ ಸಂದರ್ಭದಲ್ಲೂ ಲಸಿಕೆಯ ಸುರಕ್ಷತೆಯ ಬಗ್ಗೆ ಇದೇ ರೀತಿಯ ವದಂತಿಗಳು ಕೇಳಿ ಬಂದಿದ್ದವು. ನಂತರ ಪೊಲೀಯೋ ಲಸಿಕೆ ಎಷ್ಟು ಸುರಕ್ಷಾ ಎಂದು ಇಡೀ ದೇಶಕ್ಕೆ ಮನವರಿಕೆಯಾಯಿತು. ಹಾಗಾಗಿ ಕೊರೊನಾ ಲಸಿಕೆಯ ಸುರಕ್ಷತೆಯ ಬಗ್ಗೆಯೂ ಕೇಳಿ ಬರುತ್ತಿರುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಈ ಲಸಿಕೆಗಳು ಸುರಕ್ಷಿತವಾಗಿವೆ ಎಂಬ ಭರವಸೆಯನ್ನು ನೀಡುವುದಾಗಿ ಅವರು ಹೇಳಿದರು.
ದೆಹಲಿಯಲ್ಲಿಂದು ಕೊರೊನಾ ಲಸಿಕೆಯ ಅಣಕು ಕಾರ್ಯಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಲಸಿಕೆಯ ಪರಿಣಾಮ, ಸುರಕ್ಷತೆ ಎಲ್ಲದರ ಬಗ್ಗೆಯೂ ಕೇಂದ್ರ ಸರ್ಕಾರ ಗಮನಹರಿಸಿದೆ. ಯಾರೂ ಯಾವುದೇ ವದಂತಿಗಳಿಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೊನಾ ಲಸಿಕೆಯನ್ನು ಸಮಗ್ರ ಪರೀಕ್ಷೆಗೆ ಒಳಪಡಿಸಿದ ನಂತರವೇ ಸಾರ್ವಜನಿಕ ಬಳಕೆಗೆ ಬಿಡಲಾಗುತ್ತದೆ ಎಂದು ಅವರು ಹೇಳಿದರು.
ಕೊರೊನಾ ಲಸಿಕೆಯ ಅಣಕು ಪರೀಕ್ಷೆಯನ್ನು ಕಳೆದ ಡಿಸೆಂಬರ್ ೨೮ ಮತ್ತು ೨೯ ರಂದು ಎರಡು ದಿನಗಳ ಕಾಲ ಅಸ್ಸಾಂ, ಆಂಧ್ರಪ್ರದೇಶದ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆಸಲಾಯಿತು. ಈ ರಾಜ್ಯಗಳಲ್ಲಿ ನಡೆಸಿದ ಅಣಕು ಕಾರ್ಯಾಚರಣೆಯ ಫಲಿತಾಂಶದ ಆಧಾರದ ಮೇಲೆ ಲಸಿಕೆ ನೀಡಿಕೆ ಸಂದರ್ಭದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಇಂದಿನಿಂದ ದೇಶದ ಎಲ್ಲ ರಾಜ್ಯಗಳಲ್ಲೂ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಆಕ್ಸ್‌ಫರ್ಡ್ ಸಹಯೋಗದಲ್ಲಿ ಸೆರಂ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಾಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ ನೀಡಿದೆ. ಕೇಂದ್ರದ ಔಷಧ ಮಹಾನಿಯಂತ್ರಕರ ಅನುಮತಿ ಬಾಕಿ ಇದೆ. ಅನುಮತಿ ಸಿಕ್ಕ ನಂತರ ಲಸಿಕೆ ನೀಡಿಕೆ ಆರಂಭವಾಗಲಿದೆ ಎಂದು ಅವರು ಹೇಳಿದರು.