ಕೊರೊನಾ ಲಸಿಕೆ ಆವಿಷ್ಕಾರ ಬಿರುಸು

ವಾಷಿಂಗ್ಟನ್, ಆ. ೨- ಕೋವಿಡ್ -೧೯ ಸೋಂಕು ವಿಶ್ವದಲ್ಲೆಡೆ ಹರಡುತ್ತಿದ್ದು ಇದರ ವಿರುದ್ಧ ಹೋರಾಡಲು ಜಗತ್ತಿನ ಹಲವು ಭಾಗಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಕ್ರಿಯೆಗಳು ಶೀಘ್ರಗತಿಯಲ್ಲಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ನಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಕ್ಷೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ಔಷಧಿ ಕಂಡು ಹಿಡಿಯುವ ಕೆಲಸ. ಕಳೆದ ಜನವರಿ ೧೧ ರಿಂದಲೇ ಆರಂಭವಾಗಿದೆ. ಈಗಾಗಲೇ ಆಸ್ಟ್ರಾ ಜೆನಕ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಮರ್ಡೇನಾ, ಕ್ಯಾನಾಸಿನೋ ಸೇರಿದಂತೆ ಹಲವು ಔಷಧ ತಯಾರಕಾ ಕಂಪನಿಗಳು ಮಾನವರ ಮೇಲೆ ತಾವು ಕಂಡು ಹಿಡಿದ ಲಸಿಕೆಯನ್ನು ೩ನೇ ಹಂತದ ಪ್ರಯೋಗದಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.
ಜಗತ್ತಿನ ಯಾವುದೇ ಭಾಗದಲ್ಲಿ ಕೊರೊನಾ ಸೋಂಕಿಗೆ ಔಷಧಿಯನ್ನು ಕಂಡು ಹಿಡಿದರೆ ಅದು ಎಲ್ಲೆಂಡೆ ಸಿಗುವಂತಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವದಲ್ಲಿ ಔಷಧಿ ಅಭಿವೃದ್ಧಿ ಕಂಡು ಹಿಡಿದ ನಂತರ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಸಹಕಾರದೊಂದಿಗೆ ಭಾರತದಲ್ಲೂ ಔಷಧಿ ಉತ್ಪಾದಿಸುವ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಆರೋಗ್ಯ ಕಾರ್ಯಕರ್ತರು ಸಮಾಜ ಕೈಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಆದಿತ್ಯದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಾನಮಾನ, ಲಿಂಗ ಸಮಾನತೆ ದೊರೆಯುವಂತಾಗಬೇಕು ಎಂದು ಅವರು ಹೇಳಿದ್ದಾರೆ.
ಕೊರೊನಾಗೆ ಸೋಂಕಿನಿಂದ ವಿಶ್ವದಲ್ಲಿ ಕೋಟ್ಯಂತರ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ ಲಸಿಕೆ ಕಂಡು ಹಿಡಿಯುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ಔಷಧಿ ಹೊರ ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಹಲವು ದೇಶಗಳಲ್ಲಿ ಈಗಾಗಲೇ ೩ನೇ ಹಂತದ ಕೊರೊನಾ ಲಸಿಕೆಯ ಪ್ರಯೋಗ ನಡೆದಿದೆ. ಅವುಗಳ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ. ಮಾನವರ ಮೇಲೆ ನಡೆಸಲಾಗಿರುವ ಈ ಪ್ರಯೋಗಗಳು ಯಶಸ್ವಿಯಾದರೆ ಕೊರೊನಾ ಲಸಿಕೆ ಸಿಕ್ಕಂತಾಗಲಿದೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆದರೂ ಇದರ ವಿರುದ್ಧ ಹೋರಾಡಲು ಎಲ್ಲರ ಸಹಕಾರ ಅಗತ್ಯ. ಸರ್ಕಾರದೊಂದಿಗೆ ನಾಗರೀಕ ಸಮಾಜ, ಉದ್ದಿಮೆದಾರರು, ದಾನಿಗಳು, ಮುಂದೆ ಬರುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಕೊವಾಕ್ಸ್ ಔಷಧಿ ಪ್ರಯೋಗ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.