ಕೊರೊನಾ ಲಕ್ಷಣವಿದ್ದರೂ ನೆಗೆಟಿವ್ : ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್ ವಿಧಾನ: ಡಾ. ಸುಧಾಕರ್

ಬೆಂಗಳೂರು, ಏ.29- ಕೋವಿಡ್ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬರುವವರ ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್ ವಿಧಾನ ಅನುಸರಿಸಿ ಆಸ್ಪತ್ರೆಗೆ ದಾಖಲಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ,
ಹಲವು ಪ್ರಕರಣಗಳಲ್ಲಿ ಆರ್ ಟಿ ಪಿಸಿಆರ್ ಅಥವಾ ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿದರೂ ನೆಗೆಟಿವ್ ವರದಿ ಬರುತ್ತಿದೆ. ವ್ಯಕ್ತಿಗೆ ಕೋವಿಡ್ ರೋಗ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬರುವುದರಿಂದ, ರೋಗ ತೀವ್ರತೆ ಹೆಚ್ಚಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಿಂಡ್ರೋಮಿಕ್ ವಿಧಾನ ಅನುಸರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಧಾನದಲ್ಲಿ ಸಂಬಂಧಪಟ್ಟ ವೈದ್ಯರು ಅಥವಾ ವೈದ್ಯಾಧಿಕಾರಿಗಳೇ ರೋಗಿಗಳ ಸ್ಥಿತಿಯನ್ನು ಪ್ರಮಾಣೀಕರಿಸುತ್ತಾರೆ. ನಂತರ ರೋಗಿಗೆ ಪ್ರತ್ಯೇಕ ಸಂಖ್ಯೆಯನ್ನು ನೀಡಿ ಗುರುತಿಸಿ, ನಿರ್ದಿಷ್ಟ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗಿಸಲಾಗುತ್ತದೆ ಎಂದಿದ್ದಾರೆ.

ಇಂತವರನ್ನು‌ ಕೊರೊನಾ ರೋಗಿ ಎಂದೇ ಪರಿಗಣಿಸಲಾಗಿತ್ತದೆ. ರೋಗಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕಿರುವುದರಿಂದ ಈ ವಿಧಾನವನ್ನು ಅನುರಿಸಲು ನಿರ್ಧರಿಸಲಾಗಿದೆ. ಈ ವಿಧಾನ ಅನುಸರಿಸುವ ಕುರಿತು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.