ಕೊರೊನಾ ರೋಗ ನೀರೋಧಕ ಔಷಧಿ ನೀಡುವ ಮೂಲಕ ಗಮನ ಸೆಳೆದ ಕನೇರಿ ಮಠದ ಕಾರ್ಯಕರ್ತರು

ವಿಜಯಪುರ, ಜೂ.3-ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಸಾಕಷ್ಟು ತೊಂದರೆ ಉಂಟು ಮಾಡಿದೆ. ಈ ಎರಡನೇ ಅಲೆಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಸೋಂಕಿತರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದರೂ ಕೊರೊನಾ ಭಯ ಮಾತ್ರ ಮುಂದುವರೆದಿದೆ.
ಅದರಲ್ಲೂ ಸರಕಾರ ಕೊರೊನಾ ತಡೆಗಟ್ಟಲು, ಸೋಂಕಿತರಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿಸುತ್ತಿದ್ದು, ಇತ್ತ ಮಠಗಳೂ ಕೂಡ ಜನರ ಸಹಾಯಕ್ಕೆ ಧಾವಿಸಿವೆ. ಉಳ್ಳವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಹಣ ನೀಡಿ ಖರೀದಿಸಿದರೆ, ಬಡವರಿಗೆ ಆರೋಗ್ಯವರ್ಧಕ ಔಷಧಿಗಳು ಮರಿಚಿಕೆಯಾಗಿದ್ದವು.
ಆದರೆ, ಇಂಥ ಬಡವರ ಪಾಲಿಗೆ ವರದಾನವಾಗುವಂತೆ ಮಹಾರಾಷ್ಟ್ರದ ಕನೇರಿ ಮಠಾಧೀಶ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಬಸವ ನಾಡಿಗೆ ಕೊಟ್ಟು ಕಳುಹಿಸಿದ್ದು, ಸಂಘ ಪರಿವಾರದ ಕಾರ್ಯಕರ್ತರು ಅದನ್ನು ಸಿದ್ಧಪಡಿಸಿ ವಿಜಯಪುರ ಜಿಲ್ಲಾದ್ಯಂತ ಪೌರ ಕಾರ್ಮಿಕರು, ಕೊರೊನಾ ವಾರಿಯರ್ಸ್, ರಸ್ತೆ ಬದಿ ವ್ಯಾಪಾರಿಗಳು ಮತ್ತು ಬಡವರು ಹಾಗೂ ಅಸಹಾಯಕರಿಗೆ ತಲುಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠಾಧೀಶ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಕಳುಹಿಸಿ ಕೊಟ್ಟಿರುವ ಈ ಆರೋಗ್ಯವರ್ಧಕ ಔಷಧಿಯನ್ನು ವಿಜಯಪುರದಲ್ಲಿ ನಾಲ್ಕು ಕಡೆಗಳಲ್ಲಿ ತಲಾ 500 ಮಿಲಿ ಲೀಟರ್ ಶುದ್ಧ ಕುಡಿಯುವ ನೀರು ಅಂದರೆ ಫಿಲ್ಟರ್ ಮಾಡಲಾದ ನೀರಿನ ಬಾಟಲಿಯಲ್ಲಿ ಮಿಕ್ಸ್ ಮಾಡಿ ಉಚಿತವಾಗಿ ಪೌರ ಕಾರ್ಮಿಕರು, ಕೊರೊನಾ ಮುಂಚೂಣಿ ಕಾರ್ಯಕರ್ತರು, ಬಡವರು ಮತ್ತು ಅಸಹಾಯಕರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಈ ಆರೋಗ್ಯವರ್ಧಕ ಔಷಧಿ ವಿತರಣೆಯಲ್ಲಿ ತೊಡಗಿಕೊಂಡಿರುವ ಶಿವರುದ್ರ ಬಾಗಲಕೋಟ ತಿಳಿಸಿದ್ದಾರೆ.
ವಿಜಯಪುರ ನಗರದ ಶಂಕರಲಿಂಗ ದೇವಸ್ಥಾನದ ಕಲ್ಯಾಣ ಮಂಟಪ ದಲ್ಲಿ 30 ಸಾವಿರ ಬಾಟಲಿಗಳಲ್ಲಿ ಈ ಔಷಧಿಯನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿ ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು ಎಂಟು ವಿಧಾನ ಸಭೆ ಕ್ಷೇತ್ರಗಳ ಜನರಲ್ಲಿ ಹಂಚಲಾಗುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಹಿರಿಯರ ಮಾರ್ಗದರ್ಶನದಲ್ಲಿ 100ಕ್ಕೂ ಕ್ಕೂ ಹೆಚ್ಚು ಕಾರ್ಯಕರ್ತರು ಮಾಸ್ಕ್ ಧರಿಸಿ ಔಷಧಿ ತಯಾರಿಸುತ್ತಿದ್ದಾರೆ. 12 ವರ್ಷ ಮೇಲ್ಪಟ್ಟವರು ಇದನ್ನು ಸೇವಿಸಬಹುದಾಗಿದೆ. ಕೊರೊನಾ ಸೋಂಕು ಇರದವರು ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ತಲಾ 125 ಮಿಲಿ ಲೀಟರ್ ನಂತೆ ಎರಡು ದಿನ ಈ ಔಷಧಿ ಮಿಶ್ರಿತ ನೀರನ್ನು ಸೇವಿಸಿದರೆ ಸಾಕು. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೊನಾ ಸೋಂಕು ಇರುವವರು 500 ಮಿಲಿ ಲೀಟರ್ ಬಾಟಲಿಯಲ್ಲಿನ ಔಷಧಿ ಮಿಶ್ರಿತ ನೀರನ್ನು ಪ್ರತಿ ಎರಡು ಗಂಟೆಗೊಂದು ಸಲ ತಲಾ 30 ಮಿಲಿ ಲೀಟರ್ ನಂತೆ ಸೇವಿಸಿದರೆ ಗುಣಮುಖರಾಗಲು ಸಹಾಯವಾಗುತ್ತದೆ. ಹೋಮಿಯೋಪಥಿ ಔಷಧಿ ಇದಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರದೇ ರೋಗ ನಿರೋಧಕ ಶಕ್ತಿ ವೃದ್ಧಿಸಲು ನೆರವಾಗುವುದು ಗಮನಾರ್ಹವಾಗಿದೆ ಎಂಬುದು ಶಿವರುದ್ರ ಬಾಗಲಕೋಟ ಅವರ ಅಭಿಪ್ರಾಯವಾಗಿದೆ.
ಈಗಾಗಲೇ ವಿಜಯಪುರ ನಗರದಲ್ಲಿ ಸಂಘದ ವತಿಯಿಂದ ಡಾ. ಹೇಡಗೆವಾರ್ ಕೊವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಅಲ್ಲದೇ ವಿಜಯಪುರ ನಗರದಲ್ಲಿ ನಾಲ್ಕು ವಿಭಾಗಗಳಾಗಿ ಈ ಹೋಮಿಯೋಪಥಿ ಔಷಧವನ್ನು ವಿತರಿಸುವ ನಿರ್ಧಾರ ಮಾಡಲಾಗಿದ್ದು, ಸಂಘದ ಕಾರ್ಯಕರ್ತರು ಅತಿ ಕಡು ಬಡವರಿಗೆ ಇದತನ್ನು ವಿತರಣೆ ಆರಂಭಿಸಿದ್ದಾರೆ. 30 ಸಾವಿರ ನೀರಿನ ಬಾಟಲಿಗಳನ್ನು ದಾನಿಗಳು ಸಂಘಕ್ಕೆ ಶೇ. 50 ಬೆಲೆಯಲ್ಲಿ ಮತ್ತು ಹಲವರು ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ. 100ಕ್ಕೂ ಹೆಚ್ಚು ಕಾರ್ಯಕರ್ತರು ಔಷಧಿ ಸಿದ್ದಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ ಎಂದು ಸಂಘದ ಕಾರ್ಯಕರ್ತ ಬಸವರಾಜ ಬಿರಾದಾರ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ಎಂಟು ವಿಧಾನ ಸಭೆ ಕ್ಷೇತ್ರಗಳಿಗೆ ಈ ಔಷಧಿಯ ಬಾಟಲಿಗಳನ್ನು ಸಂಘ ಪರಿವಾರ ವಿತರಣೆ ಆರಂಭಿಸಿದ್ದು, ಈಗಾಗಲೇ 30 ಸಾವಿರ ಜನರಿಗೆ ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್, ಪೌರ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕಡು ಬಡವರಿಗೆ ಇದನ್ನು ವಿತರಣೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಇತರರಿಗೆ ನೀಡಲಾಗುವುದು ಎಂದು ವಿತರಕರು ತಿಳಿಸಿದ್ದಾರೆ