ಕೊರೊನಾ ರೋಗ ನಿವಾರಣೆಗೆ ದುರ್ಗಾ ಹೋಮ

ಕೊರಟಗೆರೆ, ಅ. ೨೭- ಜಗತ್ತಿಗೆ ಭಯದ ವಾತಾವರಣ ಸೃಷ್ಠಿಸಿ ಆರೋಗ್ಯಕ್ಕೆ ಕಂಟಕ ತಂದಿರುವ ಕೊರೊನಾ ಮಹಾಮಾರಿ ದುರ್ಗಾದೇವಿಯ ಶಕ್ತಿಯಿಂದ ದೂರವಾಗಿ ಭಕ್ತರಿಗೆ ಆರೋಗ್ಯ ನೀಡಲಿ ಎಂದು ದುರ್ಗಾಹೋಮ ನೆರವೇರಿಸಲಾಯಿತು ಎಂದು ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಡಾ.ಹೆಚ್.ಸಿ.ಪ್ರಸನ್ನಕುಮಾರ್ ತಿಳಿಸಿದರು.
ತಾಲ್ಲೂಕಿನ ಕೋಳಾಲ ಹೋಬಳಿ ತೀತಾ ಗ್ರಾ.ಪಂ. ವ್ಯಾಪ್ತಿಯ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ಕ್ಷೇತ್ರದ ಮಾತೆ ಕಮಲಮ್ಮನವರ ಬೃಂದಾವನದ ಆವರಣದಲ್ಲಿ ಮಹಾಲಕ್ಷ್ಮಿ ಕಮಲ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಲೋಕ ಕಲ್ಯಾಣಾರ್ಥ ದುರ್ಗಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊರೊನಾ ರೋಗದಿಂದ ಸಾವಿರಾರು ಭಕ್ತರಿಗೆ ದುಡಿಮೆಯಿಲ್ಲದೇ ಹಲವಾರು ರೀತಿಯ ಸಮಸ್ಯೆ ಸೃಷ್ಠಿಯಾಗಿದೆ. ಕಮಲಮ್ಮ ಬೃಂದಾವನದ ಆವರಣದಲ್ಲಿ ಭಕ್ತರ ಬೇಡಿಕೆಯಂತೆ ದುರ್ಗಾಹೋಮ ನಡೆದಿದೆ. ನಮ್ಮ ಭಾರತ ದೇಶ ಕೊರೊನಾ ಮುಕ್ತವಾಗಿ ಭಕ್ತರಿಗೆ ಆರೋಗ್ಯ ನೀಡುವಂತೆ ಗೊರವನಹಳ್ಳಿ ಮಹಾಲಕ್ಷ್ಮಿದೇವಿಯಲ್ಲಿ ಪ್ರಾರ್ಥಿಸೋಣ ಎಂದರು.
ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ಕಮಲ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಲಕ್ಷ್ಮಿಪ್ರಸಾದ್ ಮಾತನಾಡಿ, ಗೊರವನಹಳ್ಳಿ ಪುಣ್ಯಕ್ಷೇತ್ರದಲ್ಲಿ ಕಮಲಮ್ಮನ ಬೃಂದಾವನ ಮತ್ತು ದೇವಿ ಮಹಾಲಕ್ಷ್ಮಿ ಎಂಬ ಎರಡು ಶಕ್ತಿ ಕೇಂದ್ರಗಳಿವೆ. ಕಮಲಮ್ಮ ಮತ್ತು ಮಹಾಲಕ್ಷ್ಮಿ ಪವಾಡದಿಂದ ಲಕ್ಷಾಂತರ ಜನ ಭಕ್ತರಿಗೆ ಒಳಿತು ಉಂಟಾಗಿದೆ. ದುರ್ಗಾದೇವಿಯ ಪವಾಡದಿಂದ ಕೊರೊನಾ ಮಹಾಮಾರಿ ದೂರವಾಗಲಿ ಎಂದು ದುರ್ಗಾಹೋಮ ನಡೆದಿದೆ ಎಂದರು.
ಕಮಲಮ್ಮ ಬೃಂದಾವನದಲ್ಲಿ ಶರನ್ನಾವರಾತ್ರಿ ಉತ್ಸವ ಕಾರ್ಯಕ್ರಮವು ಸಹ ನಡೆದಿದೆ. ದಸರಾ ಹಬ್ಬದ ಪ್ರಯುಕ್ತ ಬೃಂದಾವನದಲ್ಲಿ ಬೊಂಬೆ ಹಬ್ಬವನ್ನು ಸಹ ಆಚರಣೆ ಮಾಡಲಾಗಿದೆ. ಗ್ರಾಮದ ಮಹಿಳೆಯರು ಮತ್ತು ಮಕ್ಕಳಿಗೆ ಬಾಗಿನ ಅರ್ಪಿಸಲಾಗಿದೆ. ದುರ್ಗಾ ಹೋಮದ ಜತೆಯಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆಯನ್ನು ನೇರವೆರಿಸಿ ಕೊರೊನಾ ರೋಗ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಲಿತಮ್ಮ, ಅರ್ಚಕರಾದ ಸುಬ್ರಹಣ್ಯ, ರಾಮಮೂರ್ತಿ, ಗ್ರಾಮಸ್ಥರಾದ ವೀರರಾಜ ಅರಸು, ಮಂಜುನಾಥ, ಲಕ್ಷ್ಮಣ್, ರಮೇಶ್, ಸೌಮ್ಯ, ಸಹನಾ, ಕುಮುದ ಮತ್ತಿತರರು ಉಪಸ್ಥಿತರಿದ್ದರು.