ಕೊರೊನಾ ರುದ್ರನರ್ತನ: ರೋಗಿಗಳಿಗೆ ಉಸಿರು ನೀಡುತ್ತಿದೆ ಶ್ರೀ ಫೌಂಡೇಶನ್!

ಕಲಬುರಗಿ.ಏ.19:ಸೇಡಂ ತಾಲೂಕಿನ ಕೋಡ್ಲಾ ಮತ್ತು ಬೆನಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಶ್ರೀಸಿಮೆಂಟ್ ಕಾರ್ಖಾನೆ ತನ್ನ ಶ್ರೀ ಫೌಂಡೇಶನ್ ಮೂಲಕ ಕೊರೊನಾ ರೋಗಿಗಳ ನೆರವಿಗೆ ನಿಂತಿದೆ.
ತಮ್ಮಲ್ಲಿ ಉತ್ಪಾದಿಸುವ ಆಕ್ಸಿಜನ್​ನ್ನು ಕಲಬುರಗಿ ಸರ್ಕಾರಿ ಇ.ಎಸ್.ಐ.ಸಿ. ಆಸ್ಪತ್ರೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಏಪ್ರಿಲ್ 17 ರಿಂದ ನಿರಂತರವಾಗಿ ಆಕ್ಸಿಜನ್ ಸಿಲಿಂಡರ್​​ಗಳನ್ನು ಒದಗಿಸುತ್ತಿರುವ ಶ್ರೀಫೌಂಡೇಷನ್ ಇಲ್ಲಿಯವರೆಗೆ 400 ಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್​ಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದೆ.
ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯೊಂದಿಗೆ ಹಂಚಿಕೊಂಡಿರುವ ಕಲಬುರಗಿ ಜಿಲ್ಲೆಯಲ್ಲಿ ನಿತ್ಯ ನೂರಾರು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿತ್ಯ ಆಸ್ಪತ್ರೆಗಳ ಬೆಡ್​ಗಳು ತುಂಬಿ, ರೋಗಿಗಳು ರಸ್ತೆಯಲ್ಲೇ ಚಿಕಿತ್ಸೆ ಪಡೆಯುವಂತಹ ವಾತಾವರಣ ನಿರ್ಮಾಣವಾಗಿದೆ.
ಕಳೆದೆರಡು ದಿನಗಳಿಂದ ಆಕ್ಸಿಜನ್ ಸಿಗದೇ ಮಹಿಳೆಯೊಬ್ಬಳು ಆಟೋದಲ್ಲೇ ಪರದಾಡುತ್ತಿರುವ ದೃಶ್ಯ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿತ್ತು. ಇನ್ನು ಸೇಡಂ ತಾಲೂಕಿನಲ್ಲೂ ಸಹ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಕ್ಲಿಷ್ಟಕರ್ ಪರಿಸ್ಥಿತಿಯಲ್ಲಿ ಶ್ರೀಸಿಮೆಂಟ್ ಶ್ರೀ ಫೌಂಡೇಶನ್ ನೆರವಿನ ಹಸ್ತ ಚಾಚಿರುವುದು ಹಲವಾರು ಜನರಲ್ಲಿ ಆಶಾಭಾವ ಮೂಡುವಂತೆ ಮಾಡಿದೆ.
ಕಷ್ಟ ಕಾಲದಲ್ಲಿ ರೋಗಿಗಳಿಗೆ ನೆರವಾಗಲು ಆಕ್ಸಿಜನ್ ಸಿಲಿಂಡರ್​ಗಳನ್ನು ಒದಗಿಸುತ್ತಿರುವ ಸೇಡಂನ ಶ್ರೀ ಫೌಂಡೇಶನ್ ಕಾರ್ಯಕ್ಕೆ ಕೆಪಿಸಿಸಿ ವಕ್ತಾರು ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜನರ ನೆರವಿಗೆ ಬರಲು ಇದೊಂದು ಒಳ್ಳೆಯ ಅವಕಾಶ ದೊರೆತಿದೆ. ಅದಕ್ಕಾಗಿ ನಮ್ಮ ಫೌಂಡೇಷನ್​ನ ಎಲ್ಲ ಮೇಲುಸ್ತುವಾರಿ ಅಧಿಕಾರಿಗಳು ಸೇರಿ, ಆಕ್ಸಿಜನ್ ಒದಗಿಸುತ್ತಿದ್ದೇವೆ. ಜನರ ಜೀವ ಕಾಪಾಡುವಲ್ಲಿ ಶ್ರೀ ಫೌಂಡೇಶನ್ ಪಾತ್ರ ಇರುವುದು, ನಮಗೂ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಸಾಂಸ್ಥಿಕ, ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿ ಅನೇಕ ಕಾರ್ಯಗಳನ್ನು ಮಾಡುತ್ತೇವೆ ಎಂದು ಶ್ರೀಸಿಮೆಂಟ್ ನ ಘಟಕ ಮುಖ್ಯಸ್ಥ ಅರವಿಂದ ಪಾಟೀಲ ತಿಳಿಸಿದ್ದಾರೆ.