ಕೊರೊನಾ ರುದ್ರನರ್ತನಕ್ಕೆ ದೇಶ ತತ್ತರ 2.60 ಲಕ್ಷ ಅಧಿಕ ಮಂದಿಗೆ ಸೋಂಕು

ನವದೆಹಲಿ,ಏ.೧೮ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ರುದ್ರನರ್ತನಕ್ಕೆ ದೇಶ ತತ್ತರಿಸಿದೆ. ಸೋಂಕಿನ ರಾಕೆಟ್ ವೇಗದ ಹೆಚ್ಚಳಕ್ಕೆ ದೇಶ ಮಂಕು ಕವಿದ ವಾತಾವರಣ ನಿರ್ಮಾಣವಾಗಿದೆ. ಇಂದೂ ಕೂಡ ಸೋಂಕು ಮತ್ತು ಸಾವಿನಲ್ಲಿ ದಾಖಲೆ ಬರೆದಿದೆ.
ಸತತ ನಾಲ್ಕನೇ ದಿನವೂ ದೇಶದಲ್ಲಿ ಕೊರೋನಾ ಸೋಂಕು ಸಂಖ್ಯೆಯಲ್ಲಿ ಹೊಸ ದಾಖಲೆ ಬರೆದಿದೆ. ಸೋಂಕಿನ ಪ್ರಸರಣದ ವೇಗಕ್ಕೆ ಕೇಂದ್ರ ರಾಜ್ಯ ಸರ್ಕಾರಗಳು ಮತ್ತು ಜನ ಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ.
ಕಳೆದ ೨೪ ಗಂಟೆಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಹೊಸ ದಾಖಲೆ ಬರೆದಿದೆ. ಇಂದು ಬೆಳಗ್ಗೆ ೮ ಗಂಟೆಯವರೆಗೆ ದೇಶದಲ್ಲಿ ೨,೬೧,೫೦೦ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು ೧೫೦೧ ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಸೋಂಕಿನಿಂದ ೧,೩೮,೪೨೩ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ೧,೪೭,೮೮,೧೦೯ ಮಂದಿಗೆ ಸೋಂಕು ಏರಿಕೆಯಾಗಿದ್ದು ಸೋಂಕಿನಿಂದ ಇದುವರೆಗೆ ಚೇತರಿಕೆ ಪ್ರಮಾಣ ೧,೨೮,೦೯,೬೪೩ ಮಂದಿಗೆ ಏರಿಕೆಯಾಗಿದೆ. ಇಲ್ಲಿಯವರೆಗೆ ೧,೭೭,೧೫೦ ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸೋಂಕು ನಿಯಂತ್ರಣ ಮಾಡುವುದು ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ.
ಸೋಂಕಿತರ ಪರದಾಟ:
ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣ ಏರಿಕೆಯಾಗುತ್ತಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಆಮ್ಲಜನಕ, ಔಷಧಿ, ಹಾಸಿಗೆ ಸಿಗದೆ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಭೀಕರವಾಗಿ ಗೋಚರಿಸುತ್ತಿದೆ. ಜನರು ಎಚ್ಚರಿಕೆ ವಹಿಸುವಂತೆ ಕೇಂದ್ರ ರಾಜ್ಯ ಸರ್ಕಾರಗಳು ಸೂಚನೆ ನೀಡುತ್ತಿವೆ.
ಕುಸಿದ ಚೇತರಿಕೆ:
ದೇಶದಲ್ಲಿ ನಿತ್ಯ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುವರ ಸಂಖ್ಯೆ ಪ್ರತಿಶತ ಕಡಿಮೆಯಾಗಿದೆ. ಫೆಬ್ರವರಿ ಮಧ್ಯಭಾಗದ ವರೆಗೆ ಶೇ.೯೭.೦೬ ರಷ್ಟು ಇದ್ದ ಚೇತರಿಕೆ ಪ್ರಮಾಣ ಇದೀಗ ಶೇ.೮೭.೨೩ಕ್ಕೆ ಕುಸಿದಿದೆ.

ಸಕ್ರಿಯ ಪ್ರಕರಣ ಏರಿಕೆ
ದೇಶದಲ್ಲಿ ನಿತ್ಯ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮಿತಿ ಮೀರಿ ಹೋಗುತ್ತಿದೆ. ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್‌ಗಡ, ಚಂದಿಗಡ, ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್ ಸೇರಿದಂತೆ ವಿವಿದ ರಾಜ್ಯಗಳಲ್ಲಿ ಸೋಂಕು ನಿತ್ಯ ಏರಿಕೆಯಾಗುತ್ತಿದೆ. ಹೀಗಾಗಿ ಸದ್ಯ ದೇಶದಲ್ಲಿ ೧೮,೦೧,೩೧೬ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಸೋಂಕು ಏರಿಕೆಯಿಂದಾಗಿ ಸಕ್ರಿಯ ಪ್ರಕರಣಗಳ ವೇಗ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. ಇದರಿಂದ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ.

೧೨,೨೬ ಕೋಟಿಗೆ ಲಸಿಕೆ:
ದೇಶದಲ್ಲಿ ಒಂದು ಕಡೆ ಸೋಂಕು ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತೊಂದು ಕಡೆ ಲಸಿಕೆ ಹಾಕುವ ಕಾರ್ಯವೂ ಹೆಚ್ಚಾಗುತ್ತಿದೆ. ಸದ್ಯ ದೇಶದಲ್ಲಿ ಇಲ್ಲಿಯವರೆಗೆ ೧೨ ಕೋಟಿಗೂ ಅಧಿಕ ಮಂದಿಗೆ ಲಸಿಕೆ ಹಾಕಲಾಗಿದೆ.
ನಿನ್ನೆ ಸಂಜೆ ತನಕ ದೇಶದಲ್ಲಿ ೧೨,೨೬,೨೨,೫೯೦ ಮಂದಿಗೆ ಲಸಿಕೆ ಹಾಕಲಾಗಿದೆ. ಸದ್ಯ ದೇಶದಲ್ಲಿ ಮೂರು ಹಂತಗಳಲ್ಲಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.