ಕೊರೊನಾ: ರಾಜ್ಯಾದ್ಯಂತ 32 ಮಕ್ಕಳು ಅನಾಥ – ಸಚಿವೆ ಶಶಿಕಲಾ ಜೊಲ್ಲೆ

ಗದಗ ಜೂ.11: ಕೋವಿಡ್ ಸೋಂಕಿನ 2 ನೇ ಅಲೆಯಿಂದಾಗಿ ಸೋಂಕಿಗೆ ತಂದೆ ತಾಯಿಯನ್ನು ಕಳೆದುಕೊಂಡ ಗದಗ ಜಿಲ್ಲೆಯ ಇಬ್ಬರು ಮಕ್ಕಳು ಸೇರಿದಂತೆ ರಾಜ್ಯದಲ್ಲಿ 32 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ಮೃತಪಟ್ಟು ತಬ್ಬಲಿಯಾದ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಬಾಲ ಸೇವಾ ಯೋಜನೆ ಜಾರಿ ತರಲಾಗಿದೆ ಎಂದರು. ಅನಾಥ ಮಕ್ಕಳಿಗೆ ಪ್ರತಿ ತಿಂಗಳು 3,500 ರೂ. ನೀಡಲಾಗುವುದು. 10 ನೇ ತರಗತಿವರೆಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಲ್ಯಾಪ್‍ಟಾಪ್ ಒದಗಿಸಲಾಗುವುದು. ಜೊತೆಗೆ ಹೆಣ್ಣು ಮಕ್ಕಳಿದ್ದಲ್ಲಿ 18 ವರ್ಷದ ನಂತರ 1 ಲಕ್ಷ ರೂ. ಮೊತ್ತವನ್ನು ನೀಡಲಾಗುವುದು. ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ ಕಾನೂನು ಅನುಸಾರ ದಾನಿಗಳು ಸಂಘಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭದ್ರ ಭವಿಷ್ಯ ನಿರ್ಮಾಣಕ್ಕೆ ಮುಂದೆ ಬಂದಲ್ಲಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಂಭವನೀಯ 3ನೇ ಅಲೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುವ ಸಂಭವವಿದ್ದು ಮುಂಜಾಗ್ರತಾ ಕ್ರಮವಾಗಿ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೂ ಸೋಂಕಿತ ಮಕ್ಕಳಿಗೆ ಎಲ್ಲ ರೀತಿಯ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮರಣ ಹೊಂದಿದ್ದು ಸರ್ಕಾರದ ಪರಿಹಾರ ಮೊತ್ತ 30 ಲಕ್ಷ ರೂ.ಗಳನ್ನು ಒದಗಿಸಲಾಗಿದೆ. ಜೊತೆಗೆ ಸರ್ಕಾರ ಇತ್ತೀಚೆಗೆ ಘೋಷಿಸಿದ ಕೋವಿಡ್ ಪ್ಯಾಕೇಜ್‍ನಲ್ಲಿ ಆಶಾ ಕಾರ್ಯಕರ್ತರಿಗೆ 2,000 ರೂ.ಗಳ ಪೆÇ್ರೀತ್ಸಾಹ ಧನ ಶೀಘ್ರವೇ ದೊರಕಿಸಿಕೊಡಲಾಗುವುದು ಎಂದರು.
ಪ್ರತಿ ಜಿಲ್ಲೆಯಲ್ಲಿ ಕೋವಿಡ್ ಕೇರ್ ಕೇಂದ್ರ ಆರಂಭಿಸಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಆರೈಕೆ ವ್ಯವಸ್ಥೆ ಮಾಡಬೇಕು. ಪಾಸಿಟಿವ್ ಬಂದ ಮಕ್ಕಳೊಂದಿಗೆ ತಾಯಿ ಇರಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೇರಿದಂತೆ ಇತರರು ಇದ್ದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಬೆಟಗೇರಿಯ ಖಾದಿ ಬೋರ್ಡ ಹತ್ತಿರದ ಸೇವಾ ಭಾರತಿ ಟ್ರಸ್ಟ್ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ವಿಧಾನ ಹಾಗೂ ಅನಾಥ ಮಕ್ಕಳ ಲಾಲನೆ ಪಾಲನೆ ವೀಕ್ಷಿಸಿದರು. ನಂತರ ಸಂಸ್ಥೆಯ ಅವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಿದರು.