ಕೊರೊನಾ ರಾಜಧಾನಿಯಾಗಿ ಮಾರ್ಪಟ್ಟ ಬೆಂಗಳೂರು

ಬೆಂಗಳೂರು, ಏ. 22- ದೇಶದ ನಗರಗಳ ಪೈಕಿ‌ ಬೆಂಗಳೂರು ನಗರದಲ್ಲೇ ಅತಿಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿ‌ ಕೊರೊನಾ ರಾಜಧಾನಿಯಾಗಿ ಮಾರ್ಪಟ್ಟಿದೆ. ನಗರದಲ್ಲಿ ಬರೋಬರಿ 1.24 ಲಕ್ಷ ಕೊರೊನಾ ಸೋಂಕಿತರಿದ್ದು, ಆಸ್ಪತ್ರೆ, ಮನೆ ಹಾಗೂ ಸಿಸಿ ಕೇಂದ್ರಗಳಲ್ಲಿ ಆರೈಕೆಯಲ್ಲಿದ್ದಾರೆ.
ಮಂಗಳವಾರದ ಅಂತ್ಯದವರೆಗೂ 1.25 ಲಕ್ಷ ಸಕ್ರಿಯ ಪ್ರಕರಣಗಳು ಇರುವ ಮೂಲಕ ಪುಣೆ ಮೊದಲ ಸ್ಥಾನದಲ್ಲಿತ್ತು. ಆದರೆ, ಬುಧವಾರ ಪುಣೆಯಲ್ಲಿ 10,852 ಮಂದಿಗೆ, ಬೆಂಗಳೂರಿನಲ್ಲಿ 13,640 ಮಂದಿಗೆ ಸೋಂಕು ಹಬ್ಬುವ ಮೂಲಕ ಬೆಂಗಳೂರು ಮೊದಲ ಸ್ಥಾನಕ್ಕೆ ಏರಿದೆ.
ಪುಣೆಯಲ್ಲಿ ಅತಿಹೆಚ್ಚು ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,24,894ಕ್ಕೆ ಏರಿಕೆಯಾಗಿದೆ.
1.21 ಲಕ್ಷದೊಂದಿಗೆ ಪುಣೆ ಎರಡನೇ ಸ್ಥಾನದಲ್ಲಿದೆ. ಬುಧವಾರ ದೆಹಲಿ ಹೊರತುಪಡಿಸಿದರೆ ಬೆಂಗಳೂರಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಕಂಡು ಬಂದಿವೆ. ಆದರೆ ದೆಹಲಿಯಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಉತ್ತಮವಾಗಿದ್ದು, ಒಂದು ಲಕ್ಷಕ್ಕೂ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ಸದ್ಯ ಬೆಂಗಳೂರಿನ ಸೋಂಕಿನ ಏರಿಕೆ ಅಂದಾಜಿಸಿದರೆ, ಒಂದೇ ವಾರದಲ್ಲಿ ದೆಹಲಿಯನ್ನೂ ಹಿಂದಿಕ್ಕುವ ಸಾಧ್ಯತೆ ಇದೆ.
ನಗರದ ಸಕ್ರಿಯ ಪ್ರಕರಣಗಳ ಪೈಕಿ 1.31 ಲಕ್ಷ ಜನ ಮನೆ ಆರೈಕೆಯಲ್ಲೇ ಇದ್ದು, 12 ಸಾವಿರ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಸೋಂಕಿತರು ಹಾಸಿಗೆ ಸಿಗದೆ ಪರದಾಡುತ್ತಿದ್ದಾರೆ. ಆಸ್ಪತ್ರೆಗಳ ಮುಂಭಾಗ, ಸ್ಮಶಾನಗಳ ಮುಂಭಾಗ ಸಾಲುಗಟ್ಟಿ ಕಾಯುವಂತಾಗಿದೆ. ಆಸ್ಪತ್ರೆಯ ಐಸಿಯು ಬೆಡ್ ಗಳಲ್ಲಿ 250 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕಕ್ಕೆ 3ನೇ ಸ್ಥಾನ!
ಕೇಂದ್ರ ಸರ್ಕಾರ ಈವರೆಗಿನ ಕೋವಿಡ್ ಖಚಿತ ಪ್ರಕರಣಗಳ ಮೂರು ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಕರ್ನಾಟಕ ರಾಜ್ಯ ಕೆಂಪುಬಣ್ಣದ ಪಟ್ಟಿಯಲ್ಲಿದ್ದು ಮೂರನೇ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಿವೆ.