ಕೊರೊನಾ ರಕ್ಷಣೆಗೆ ವ್ಯಾಕ್ಸಿನೇಷನ್ ಮಾರ್ಗ: ಖಾಶೆಂಪುರ್

ಬೀದರ: ಜೂ.9:ಕೊರೊನಾ ಮಹಾಮಾರಿಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ಮಹಾಮಾರಿಯಿಂದ ರಕ್ಷಣೆ ಪಡೆದುಕೊಳ್ಳಲು ಕೊರೊನಾ ವ್ಯಾಕ್ಸಿನೇಷನ್ ಒಂದೇ ಮಾರ್ಗ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಗ್ರಾಮದ ಗ್ರಾಮ ಪಂಚಾಯ್ತಿ ಆವರಣದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊವಿಸಿಲ್ಡ್ ವ್ಯಾಕ್ಸಿನ್ ಕೊಡಿಸಿ ಮಾತನಾಡಿದ ಅವರು, ಕೊವಿಡ್ – 19 ವೈರಸ್ ಹಾವಳಿಯಿಂದ ಅನೇಕ ಸಾವುನೋವುಗಳು ಸಂಭವಿಸಿವೆ. ಕೊರೊನಾ ವೈರಸ್ ನ್ನು ತೊಲಗಿಸಲು ವಿಜ್ಞಾನಿಗಳು ಸತತ ಪರಿಶ್ರಮ ಪಡುತ್ತಿದ್ದಾರೆ. ವಿಜ್ಞಾನಿಗಳ ಪರಿಶ್ರಮದ ಫಲದಿಂದ ವ್ಯಾಕ್ಸಿನ್ ದೊರಕಿವೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದುಕೊಂಡು ಕೊರೊನಾದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು.
ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಕೊರೊನಾದಿಂದ ದೂರವಿರಲು ಪ್ರತಿಯೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಅತ್ಯವಶ್ಯಕ ಸಂದರ್ಭಗಳಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಓಡಾಡಬೇಕು.
ಕೊರೊನಾದ ಬಗ್ಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಬದಲಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ವೈರಸ್ ತಗುಲಿದವರನ್ನು ದೂರತಳ್ಳುವ ಬದಲು ಅವರಿಗೆ ಬೇಕಾಗುವ ಚಿಕಿತ್ಸೆ, ಆತ್ಮಸೈರ್ಯ ನೀಡುವ ಕೆಲಸವನ್ನು ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಸಂಜುರೆಡ್ಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.