ಕೊರೊನಾ ಯೋಧರಿಗೆ ಹೂ ಮಳೆ: ಆಶಾ ಕಾರ್ಯಕರ್ತರಿಗೆ ಸ್ಟೀಮರ್ ಯಂತ್ರಗಳ ವಿತರಣೆ

ಕಲಬುರಗಿ.ಜೂ.11:ವಿಶ್ವಜ್ಯೋತಿ ಪ್ರತಿಷ್ಠಾನದ 13 ನೇ ವರ್ಷಾಚರಣೆ ನಿಮಿತ್ಯ ಮಹಾಮಾರಿ ಕೊರೋನಾದ ಸಂಕಷ್ಟದ ಸಂದರ್ಭದಲ್ಲೂ ತಮ್ಮ ಜೀವದ ಹಂಗು ತೊರೆದು ಪ್ರಾಮಾಣಿಕ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತರಿಗೆ ಗೆಳೆಯರ ಬಳಗದ ವತಿಯಿಂದ ಸ್ಠೀಮರ್ ಯಂತ್ರಗಳನ್ನು ಕೊಡಲಾಯಿತು.
ನಂತರ ಯೋಧರಂತೆ ಕೊರೋನಾದ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ಪೌರ ಕಾರ್ಮಿಕರು, ಆರೋಗ್ಯ ಸಹಾಯಕರು, ಪೊಲೀಸ್, ಅಗ್ನಿಶಾಮಕ ದಳ, ಶಿಕ್ಷಕ ಸೇರಿದಂತೆ ವಿವಿಧ ವೃತ್ತಿಗಳ ಪ್ರತಿನಿಧಿಗಳನ್ನು ಹೂ ಮಳೆ ಸುರಿಸುವ ಮೂಲಕ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ ಅಪರೂಪದ ಕಾರ್ಯಕ್ರಮವೊಂದು ಶುಕ್ರವಾರ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿ ಜರುಗಿತು.
ನೇತೃತ್ವ ವಹಿಸಿದ್ದ ಸಂಘಟಕ ವಿಜಯಕುಮಾರ್ ತೇಗಲತಿಪ್ಪಿ ಅವರು ಮಾತನಾಡಿ, ಕಣ್ಣಿಗೆ ಕಾಣದ ಕೊರೋನಾ ಎಂಬ ವೈರಿ ಮನುಕುಲಕ್ಕೆ ಸವಾಲೊಡ್ಡಿದೆ. ಇದಕ್ಕಾಗಿ ಹೆದರುವ ಅಗತ್ಯವಿಲ್ಲ. ನಮ್ಮ ಜೀವನ ಶೈಲಿ ಬದಲಾಯಿಸಿಕೊಂಡು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಸಾಕು ಈ ಕೊರೊನಾದಿಂದ ಪಾರಾಗಬಹುದು ಎಂದರು.
ಆಶಾ ಕಾರ್ಯಕರ್ತರು, ಪೊಲೀಸ್, ಆರೋಗ್ಯ ಇಲಾಖೆ, ಪೌರ ಕಾರ್ಮಿಕರು, ಶಿಕ್ಷಕರು ಸೇರಿದಂತೆ ಅನೇಕ ಕೊರೊನಾ ಯೋಧರು ಕೊರೋನಾದ ಸಂದಿಗ್ಧ ಸಂದರ್ಭದಲ್ಲೂ ತಮ್ಮ ಕುಟುಂಬದ ಚಿಂತನೆ ಮಾಡದೇ ಇಡೀ ಸಮಾಜವೇ ನಮ್ಮ ಕುಟುಂಬ ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಿರುವ ಈ ಕೊರೊನಾ ವಾರಿಯರ್ಸ್‍ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ಸಾಹಿತ್ಯ ಪ್ರೇರಕ ಶರಣರಾಜ್ ಛಪ್ಪರಬಂದಿ, ಕಲ್ಯಾಣಕುಮಾರ್ ಶೀಲವಂತ್ ಅವರು ಮಾತನಾಡಿ, ಕೊರೋನಾ ಸೋಂಕಿನಿಂದ ಮುಕ್ತರಾಗಬೇಕಾದರೆ ಸ್ವಯಂ ಜಾಗೃತಿಯೊಂದೇ ದಾರಿ. ಹಾಗಾಗಿ, ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಒತ್ತು ನೀಡುವಂಥ ಆರೋಗ್ಯಕರ ಜೀವನಶೈಲಿಯನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು. ಪ್ರಮುಖರಾದ ಡಾ. ಬಾಬುರಾವ್ ಚವ್ಹಾಣ್, ಸಂದೇಶ್ ಕಮಕನೂರ್, ರವೀಂದ್ರಕುಮಾರ್ ಭಂಟನಳ್ಳಿ, ಪ್ರಭುಲಿಂಗ್ ಮೂಲಗೆ ಮುಂತಾದವರು ಪಾಲ್ಗೊಂಡಿದ್ದರು.