ಕೊರೊನಾ ಯೋಧರಿಗೆ ಸನ್ಮಾನ

ಕಲಬುರಗಿ,ಡಿ.26-ಕಮಲಾಪುರ ತಾಲ್ಲೂಕಿನ ಸುಕ್ಷೇತ್ರ ಮಹಾಗಾಂವ ಕಳ್ಳಿಮಠದಲ್ಲಿ ನಡೆದ ಲಿಂ.ವಿರೂಪಾಕ್ಷ ಶಿವಾಚಾರ್ಯರ 41ನೇ ಪುಣ್ಯ ಸ್ಮರಣೋತ್ಸವ, ಧರ್ಮಸಭೆ ಕಾರ್ಯಕ್ರಮದಲ್ಲಿ ಕೊರೊನಾ ಯೋಧರಿಗೆ, ಗಣ್ಯರಿಗೆ ಹಾಗೂ 10ನೇ ಮತ್ತು 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
10ನೇ ಮತ್ತು 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಗೌರವಿಸಿದ ಗುರುಲಿಂಗ ಶಿವಾಚಾರ್ಯರು, ಕಳ್ಳಿಮಠವು ಪವಾಡಗಳ ಶಕ್ತಿಯ ತಾಣವಾಗಿದ್ದು, ಭಕ್ತರ ಪಾಲಿನ ಕಲ್ಪವೃಕ್ಷವಾಗಿದೆ. ಮಠದ ಶ್ರೇಯೋಭಿವೃದ್ಧಿಗಾಗಿ ಎಲೆಮರೆ ಕಾಯಿಯಂತೆ ಶ್ರಮಿಸುತ್ತಿರುವ ಭಕ್ತಾಧಿಗಳು ಕಾಯಕ ಜೀವಿಗಳಾಗಿ, ಧರ್ಮವಂತರಾಗಿ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡರೆ ಬದುಕು ಬಂಗಾರವಾದೀತು ಎಂದು ಆಶೀರ್ವಚನ ನೀಡಿದರು.
ಶಿವಕವಿ ಜೋಗೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ನಯೋಗಿ, ನೇಗಿಲಯೋಗಿ, ಸಾಕ್ಷರಯೋಗಿ, ಧರ್ಮಯೋಗಿಗಳಾಗಿರುವ ಶ್ರೀಗಳು ಈ ಭಾಗದಲ್ಲಿ ಬಡ ಮಕ್ಕಳ ಪಾಲಿನ ದೇವರೇ ಸರಿ. ಪೂಜ್ಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜೊತೆಗೆ ವಿದ್ಯಾದಾನ ಮಾಡುತ್ತಿದ್ದಾರೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜಯಶ್ರೀ ಬಸವರಾಜ ಮತ್ತಿಮೂಡ ಅವರು ಮಾತನಾಡಿ, ಕೊರೊನಾ ಯೋಧರಿಗೆ, ರೈತಾಪಿ ವರ್ಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಸನ್ನಾನಿಸಿದ್ದು ಸಂತಸ ತಂದಿದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿದ್ದಾಮಪ್ಪ ಪಾಟೀಲ ಧಂಗಾಪೂರ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪೂಜ್ಯರು ಕೃಷಿ ಮಾಡುತ್ತಿದ್ದು, ಕೃಷಿ ಕ್ಷೇತ್ರದ ಯಶಸ್ಸಿಗೆ ಕಾರಣವಾಗಿದೆ ಎಂದರು.
ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಬಿಜೆಪಿ ಮುಖಂಡ ರವಿ ಬಿರಾದಾರ, ಜಿ.ಪಂ.ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ, ನ್ಯಾಯವಾದಿ ಶಿವಕುಮಾರ ಪಸಾರ, ಸುರೇಶ ಲೇಂಗಟಿ, ಮಲ್ಲಿಕಾರ್ಜುನ ಸೇರಿದಂತೆ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂದು ಮುಂಜಾನೆ ಪೂಜ್ಯ ಗುರುವಿನ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಅಯ್ಯಾಚಾರ, ಶಿವದೀಕ್ಷೆ, ಗಣಾರಾಧನೆ ಕಾರ್ಯಕ್ರಮ ಜರುಗಿದವು. ಯಂಕಂಚಿ, ಭೂಸಣಗಿ, ಮರ್ತೂರ, ಮಹಾಗಾಂವ ಹಾಗೂ ತೊನಸನಹಳ್ಳಿ ಭಜನಾ ಮಂಡಳಿಗಳಿಂದ ಸಂಗೀತ ಸೇವೆ ಜರುಗಿತು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ತಮ್ಮ ಹಾಸ್ಯ ಕಲೆಯ ಮೂಲಕ ಜನರನ್ನು ರಂಜಿಸಿದರು. ಶಿವಲಿಂಗಯ್ಯ ಕಳ್ಳಿಮಠ ಸ್ವಾಗತಿಸಿದರು. ಜೈಸಿಂಗ್ ಜಾಧವ್ ಪ್ರಾರ್ಥಿಸಿದರು. ರೇವಣಸಿದ್ದಪ್ಪಾ ನಿಂಬಾಜಿ ನಿರೂಪಿಸಿದರು. ಅನೀಲಕುಮಾರ ಕೋರೆ ವಂದಿಸಿದರು. ವಿಶ್ವರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.